ತಿರುವನಂತಪುರ: ರಾಜ್ಯ ಸರ್ಕಾರ ಕೂಡಲೇ 100 ಕೋಟಿ ರೂ.ಗಳನ್ನು ನೀಡದ ಹೊರತು ಮುಂದೆ ಸಾಗಲು ಸಾಧ್ಯವಿಲ್ಲ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಹೇಳಿದೆ. ಕರೋನಾ ಮಾನದಂಡಗಳಿಂದಾಗಿ ಶಬರಿಮಲೆ ಯಾತ್ರೆಯನ್ನು ನಿರ್ಬಂಧಿಸಿರುವುದರಿಂದ ದೇವಸ್ವಂ ಮಂಡಳಿಯು ತೀರ್ವ ನಷ್ಟದಲ್ಲಿದೆ. ಕಳೆದ ಋತುವಿನಲ್ಲಿ 21 ಕೋಟಿ ರೂ. ಹಾಗೂ ಅದಕ್ಕಿಂತ ಹಿಂದಿನ ಋತುವಿನಲ್ಲಿ 269 ಕೋಟಿ ರೂ.ಗಳ ಆದಾಯ ಮಾತ್ರ ಗಳಿಸಿದೆ. ಕಳೆದ ವರ್ಷ ದಾಖಲೆಯ ಆದಾಯ ಲಭ್ಯವಾಗಿತ್ತು.
ಶಬರಿಮಲೆ ಈಗ ಮುಖ್ಯ ಸಮಸ್ಯೆಯಾಗಿ ಸರ್ಕಾರಕ್ಕೆ ಕಾಡುತ್ತಿದೆ. ಆರ್ಥಿಕ ಸಮಸ್ಯೆ ತೀವ್ರವಾಗಿದೆ. ತಿರುವಾಂಕೂರು ದೇವಸ್ವಂ ಮಂಡಳಿ ಶಬರಿಮಲೆಯ ಆದಾಯದಿಂದ ಮಾತ್ರ ನಿರ್ವಹಿಸಲ್ಪಡುತ್ತದೆ. ಲಾಕ್ ಡೌನ್ ಸಂದರ್ಭ ತೀರ್ಥಯಾತ್ರೆಯಲ್ಲಿ ಕೇವಲ 21 ಕೋಟಿ ರೂ.ಮಾತ್ರ ಆದಾಯ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ 100 ಕೋಟಿ ರೂ.ಗಳನ್ನು ಸರ್ಕಾರ ತಕ್ಷಣ ನೀಡದಿದ್ದಲ್ಲಿ ಮಂಡಳಿಗೆ ಒಂದು ದಿನವೂ ಮುಂದುವರಿಯಲು ಸಾಧ್ಯವಿಲ್ಲ. ಚಟುವಟಿಕೆಯನ್ನು ಸಹ ನಿಲ್ಲಿಸಬೇಕಾದ ಪರಿಸ್ಥಿತಿ ಇದೆ. ಸುಮಾರು 5,000 ಉದ್ಯೋಗಿಗಳಿಗೆ ಇನ್ನೂ ವೇತನ ನೀಡಬೇಕಿದೆ. ಶಬರಿಮಲೆ ಹೊರತುಪಡಿಸಿ ಇತರ 1250 ದೇವಾಲಯಗಳಲ್ಲಿ ಯಾವ ಆದಾಯವೂ ಲಭಿಸುತ್ತಿಲ್ಲ ಎಂದು ದೇವಸ್ವಂ ಮಂಡಳಿಯ ಅಧ್ಯಕ್ಷ ಎನ್. ವಾಸು ಸ್ಪಷ್ಟಪಡಿಸಿದ್ದಾರೆ.
2018 ರಲ್ಲಿ ರಾಜ್ಯ ಸರ್ಕಾರವು ಮಹಿಳಾ ಪ್ರವೇಶವನ್ನು ಜಾರಿಗೆ ತರಲು ನಿರ್ಧರಿಸಿದಾಗ ಮಂಡಳಿಯು ಮೊದಲ ಹಿನ್ನಡೆ ಅನುಭವಿಸಿತು.ಬಳಿಕ ಭಕ್ತರಿಂದ ಪ್ರತಿಭಟನೆ ಮತ್ತು ಬಹಿಷ್ಕಾರಗಳು ನಡೆದವು. ಮಹಿಳಾ ಪ್ರವೇಶದ ವಿಷಯವನ್ನು ವಿಶಾಲ ನ್ಯಾಯಪೀಠಕ್ಕೆ ಬಿಡಲು ಸುಪ್ರೀಂ ಕೋರ್ಟ್ ತೀರ್ಪು ನೀಡಿದಾಗ ಮಹಿಳೆಯರ ಪ್ರವೇಶಕ್ಕೆ ಸರ್ಕಾರ ವಿರೋಧ ವ್ಯಕ್ತಪಡಿಸಿತು. ಆ ಸಂದರ್ಭ ದೇವಸ್ವಂ ಮಂಡಳಿಯು ಸಾರ್ವಕಾಲಿಕ ದಾಖಲೆಯ ಆದಾಯ `269 ಕೋಟಿ ರೂ.ಗಳನ್ನು ಗಳಿಸಿತು.
ದೇವಸ್ವಂ ಮಂಡಳಿಯಲ್ಲಿ 5,000 ಉದ್ಯೋಗಿಗಳು ಮತ್ತು 4,000 ಪಿಂಚಣಿದಾರರಿದ್ದಾರೆ. ಅವರ ಸಂಬಳ ಮತ್ತು ಪಿಂಚಣಿ ಅಸ್ತವ್ಯಸ್ತವಾಗಿದೆ ಎಂದು ವಾಸು ಹೇಳಿದರು.