ಪಾಟ್ನಾ: 10 ನೇ ತರಗತಿಯ ಪರೀಕ್ಷೆಗೆ ಹಾಜರಾಗಿದ್ದ 21 ವರ್ಷದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಕೆ ಗಂಡು ಮಗುವನ್ನು ಪ್ರಸವಿಸಿದ ಅಸಾಮಾನ್ಯ ಘಟನೆ ಬಿಹಾರದಲ್ಲಿ ನಡೆದಿದೆ.
ಪರೀಕ್ಷೆ ನಡೆಯುತ್ತಿರುವಾಗಲೇ ಆಕೆಗೆ ಪ್ರಸವ ವೇದನೆ ಎದುರಾಗಿತ್ತು. ಬಿಹಾರದ ಮುಜಾಫರ್ ಜಿಲ್ಲೆಯ ಮಹಾಂತ್ ದರ್ಶನ್ ದಾಸ್ ಮಹಿಳಾ (ಎಂಡಿದಿಎಂ) ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ವರದಿಯಾಗಿದೆ.
ಕುಧನಿ ಬ್ಲಾಕ್ ನಲ್ಲಿರುವ ಕಾಫೆನ್ ಗ್ರಾಮದ ನಿವಾಸಿಯಾಗಿರುವ ಶಾಂತಿ ಕುಮಾರಿ 10 ನೇ ತರಗತಿಯ ಪರೀಕ್ಷೆಗಳನ್ನು ಬರೆಯುತ್ತಿದ್ದ ಮಹಿಳೆಯಾಗಿದ್ದು, ಪರೀಕ್ಷೆ ಬರೆಯುವುದಕ್ಕಾಗಿ ಒಂದು ಗಂಟೆಗೂ ಹೆಚ್ಚಿನ ಕಾಲ ಪ್ರಸವ ವೇದನೆಯನ್ನು ಸಹಿಸಿಕೊಂಡಿದ್ದಾರೆ.
ಗರ್ಭಿಣಿ ಮಹಿಳೆ ಪರೀಕ್ಷಾ ಕೇಂದ್ರದ ಅಧೀಕ್ಷಕರಾದ ಮಧುಮಿತ ಅವರ ಸಹಾಯ ಕೇಳಿದ ಬೆನ್ನಲ್ಲೇ ಆಕೆಯನ್ನು ಸಾದರ್ ಆಸ್ಪತ್ರೆಗೆ, ಆಕೆಯ ಪತಿ ಬ್ರಿಜು ಸಾಹ್ನಿ ಜೊತೆಗೆ ಆಂಬುಲೆನ್ಸ್ ನಲ್ಲಿ ಕರೆದೊಯ್ಯಲಾಯಿತು.
ಹೆರಿಗೆಗೆ ಕೆಲವೇ ದಿನಗಳಷ್ಟೇ ಇದ್ದಿದ್ದರಿಂದ ಪರೀಕ್ಷೆಗೆ ಹಾಜರಾಗದಂತೆ ಕುಟುಂಬ ಸದಸ್ಯರು ಸಲಹೆ ನೀಡಿದ್ದರು. ಶಾಂತಿ ಕುಮಾರಿಗೆ ಓದಿನಲ್ಲಿ ಆಸಕ್ತಿ ಇದ್ದಿದ್ದರಿಂದ ಆಕೆ ಪರೀಕ್ಷೆಗೆ ಗೈರಾಗಲು ಒಪ್ಪಿರಲಿಲ್ಲ ಎಂದು ಪತಿ ಬ್ರಿಜು ಸಾಹ್ನಿ ಹೇಳಿದ್ದಾರೆ.
ಪರೀಕ್ಷೆಯ ವೇಳೆಯಲ್ಲಿ ಜನಿಸಿದ್ದರಿಂದ ಮಗುವಿಗೆ ಪರೀಕ್ಷೆ ಎಂಬ ಅರ್ಥವನ್ನೇ ನೀಡುವ 'ಇಮ್ತಿಹಾನ್' ಹೆಸರನ್ನು ನಾಮಕರಣ ಮಾಡಲಾಗಿದೆ.