ಭುವನೇಶ್ವರ: ಕೋವಿಡ್-19 ಲಾಕ್‌ಡೌನ್ ಸಂದರ್ಭದಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ಧಾರಾವಾಹಿ ವೀಕ್ಷಿಸಿದ ಒಡಿಶಾದ ಆಯುಷ್ ಕುಮಾರ್ ಕುಂಟಿಯಾ (10) ಎಂಬ ಬಾಲಕ ʼರಾಮಾಯಣʼ ಕೃತಿ ರಚಿಸಿ ಅಚ್ಚರಿ ಮೂಡಿಸಿದ್ದಾನೆ.
104 ಪುಟಗಳ ಈ ಕೃತಿಯು ಒಡಿಶಾ ಭಾಷೆಯಲ್ಲಿದ್ದು, ಪಿಲಾಕ ರಾಮಾಯನ (ಮಕ್ಕಳ ರಾಮಾಯಣ) ಎಂದು ಹೆಸರಿಡಲಾಗಿದೆ.
ಈ ಬಗ್ಗೆ ಮಾತನಾಡಿರುವ ಆಯುಷ್, ʼಲಾಕ್‌ಡೌನ್ ಸಂದರ್ಭದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುವ ರಾಮಾಯಣ ವೀಕ್ಷಿಸುವಂತೆ ಹಾಗೂ ಬಳಿಕ ಅದರ ಬಗ್ಗೆ ಏನಾದರು ಬರೆಯುವಂತೆ ನನ್ನ ಚಿಕ್ಕಪ್ಪ ಮಾರ್ಚ್‌ನಲ್ಲಿ ಸಲಹೆ ನೀಡಿದ್ದರುʼ
ʼಅದರಂತೆ, ದೂರದರ್ಶನದಲ್ಲಿ ಪ್ರಸಾರವಾದ ರಾಮಾಯಣ ಧಾರಾವಾಹಿ ವೀಕ್ಷಿಸಿದೆ ಮತ್ತು ಪ್ರತಿಯೊಂದು ಸಂಚಿಕೆಯ ಬಗ್ಗೆ ನೋಟ್‌ಬುಕ್‌ನಲ್ಲಿ ಬರೆದೆ. ಬಳಿಕ ಈ ಪುಸ್ತಕವನ್ನು ಪೂರ್ಣಗೊಳಿಸಲು ಎರಡು ತಿಂಗಳು ಬೇಕಾಯಿತುʼ ಎಂದು ತಿಳಿಸಿದ್ದಾನೆ.
ಮುಂದುವರಿದು, ʼಶ್ರೀರಾಮ 14 ವರ್ಷಗಳ ವನವಾಸಕ್ಕೆ ತೆರಳಿದ್ದು, ಸೀತಾದೇವಿಯನ್ನು ರಾವಣ ಅಪಹರಿಸಿದ್ದೂ ಸೇರಿದಂತೆ ರಾಮಾಯಣದ ಹಲವು ಪ್ರಮುಖ ಕಥನಗಳನ್ನು ಬರೆದಿದ್ದೇನೆ. ಜೊತೆಗೆ ರಾಮ ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದಾಗ ಜನರು ಆತನನ್ನು ಸ್ವಾಗತಿಸಿದ ಬಗೆಯನ್ನು ವಿವರಿಸಿದ್ದೇನೆʼ ಎಂದು ಹೇಳಿಕೊಂಡಿದ್ದಾನೆ.
ಜೀವನದಲ್ಲಿ ಹೊಸ ಎತ್ತರವನ್ನು ತಲುಪಲು ಪ್ರತಿಯೊಬ್ಬರೂ ಓದುವ ಮತ್ತು ಬರೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದೂ ಜನರನ್ನು ಒತ್ತಾಯಿಸಿದ್ದಾನೆ.