ಮುಂಬೈ:ಪೋಲಿಯೋ ಹನಿ ಬದಲು 12 ಮಕ್ಕಳಿಗೆ ಹ್ಯಾಂಡ್ ಸ್ಯಾನಿಟೈಸರ್ ಹಾಕಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಸಿಬ್ಬಂದಿಯ ತೀವ್ರ ನಿರ್ಲಕ್ಷ್ಯದ ಪರಿಣಾಮ 12 ಮಕ್ಕಳಿಗೆ ಪೋಲಿಯೊ ಲಸಿಕೆ ಹನಿಗಳ ಬದಲಿಗೆ ಹ್ಯಾಂಡ್ ಸ್ಯಾನಿಟೈಸರ್ ಹಾಕಿದ್ದರು.
5 ವರ್ಷಕ್ಕಿಂತ ಕಡಿಮೆ ವಯಸ್ಸಿನ 12 ಮಕ್ಕಳಿಗೆ ಪೋಲಿಯೊ ಹನಿಗಳ ಬದಲಿಗೆ ಎರಡು ಹನಿ ಸ್ಯಾನಿಟೈಸರ್ ನೀಡಲಾಗಿದೆ ಎಂದು ಯವತ್ಮಾಲ್ ಜಿಲ್ಲಾ ಪರಿಷತ್ ಸಿಇಒ ಶ್ರೀಕೃಷ್ಣ ಪಂಚಲ್ ತಿಳಿಸಿದ್ದಾರೆ. 12 ಮಕ್ಕಳಲ್ಲಿ ಒಂದು ಮಗು ವಾಂತಿ ಮಾಡಿದೆ" ಎಂದು ಅವರು ಹೇಳಿದ್ದಾರೆ.
5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸ್ಯಾನಿಟೈಸರ್ ಹಾಕಲಾಗಿದ್ದು, ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳ ಸ್ಥಿತಿ ಸ್ಥಿರವಾಗಿದೆ ಎಂದು ಜಿಲ್ಲೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಪ್ಸಿಕೊಪ್ರಿ ಗ್ರಾಮದ ಭನ್ಬೋರಾ ಪಿಎಚ್‌ಸಿ(ಪ್ರಾಥಮಿಕ ಆರೋಗ್ಯ ಕೇಂದ್ರ)ದಲ್ಲಿ ಭಾನುವಾರ 1-5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ವ್ಯಾಕ್ಸಿನೇಷನ್ ನಡೆಯುತ್ತಿರುವಾಗ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಪೋಲಿಯೊ ಲಸಿಕೆ ಹಾಕುವ ವೇಳೆ ನಿರ್ಲಕ್ಷ್ಯ ವಹಿಸಿದ ಮೂವರು ಆರೋಗ್ಯ ಕಾರ್ಯಕರ್ತರನ್ನು ಅಮಾನತು ಮಾಡಲಾಗುವುದು ಎಂದು ಪಂಚಲ್ ತಿಳಿಸಿದ್ದಾರೆ.