ನವದೆಹಲಿ: ಟೆಲಿಕಾಂ ಮತ್ತು ನೆಟ್‌ವರ್ಕಿಂಗ್ ಉತ್ಪನ್ನಗಳಿಗೆ 12,195 ಕೋಟಿ ರೂ.ಗಳ ಉತ್ಪಾದನಾ ಲಿಂಕ್ಡ್ ಪ್ರೋತ್ಸಾಹಕ (ಪಿಎಲ್‌ಐ) ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಕೋವಿಡ್ ಸಾಂಕ್ರಾಮಿಕದ ನಡುವೆ 2020ರ ಏಪ್ರಿಲ್ ತಿಂಗಳಲ್ಲಿ ಈ ಪ್ರಸ್ತಾವನೆ ಘೋಷಿಸಲಾಗಿತ್ತು. ಮೊಬೈಲ್ ಮತ್ತು ಕಾಂಪೊನೆಂಟ್ ಉತ್ಪಾದನೆಗೆ ಸಂಬಂಧಿಸಿದ ಪಿಎಲ್‌ಐ ಯಶಸ್ಸನ್ನು ಉತ್ತೇಜಿಸುವ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಸಚಿವ ಸಂಪುಟ ಅನುಮೋದಿಸಿದೆ.
ಇದಕ್ಕೆ ಅರ್ಜಿ ಸಲ್ಲಿಸಲು 2020ರ ಜುಲೈ 31 ಕೊನೆಯ ದಿನವಾಗಿದ್ದರೂ, ಅದರ ನಂತರ ಉದ್ಯಮಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಪಂಚದ ಎಲ್ಲಾ ಪ್ರಮುಖ ಮೊಬೈಲ್ ಘಟಕ ತಯಾರಕರು ಹೂಡಿಕೆ ಮಾಡುವ ಮೂಲಕ, ರಫ್ತು ಪ್ರಾರಂಭಿಸುವ ಮೂಲಕ ಮತ್ತು ಸಾವಿರಾರು ಭಾರತೀಯರಿಗೆ ಉದ್ಯೋಗ ನೀಡುವ ಮೂಲಕ ಭಾರತದಲ್ಲಿ ತಮ್ಮ ಪ್ರಬಲ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದಾರೆ.
ಸಂಪುಟದ ನಿರ್ಧಾರವು ಭಾರತವನ್ನು ಮೂಲ ಪ್ರಸರಣ ಉಪಕರಣಗಳು, 4 ಜಿ , 5 ಜಿ ಮುಂದಿನ ಪೀಳಿಗೆಯ ರೇಡಿಯೋ ಲಭ್ಯತೆಯ ನೆಟ್‌ವರ್ಕ್ ಮತ್ತು ವೈರ್‌ಲೆಸ್ ಉಪಕರಣ, ಗ್ರಾಹಕರ ಆವರಣದ ಉಪಕರಣ (ಸಿಪಿಇ), ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ ) ಪ್ರವೇಶ ಸಾಧನಗಳು, ಇತರ ವೈರ್‌ಲೆಸ್ ಸಲಕರಣೆಗಳು ಮತ್ತು ಸ್ವಿಚ್‌ಗಳು, ರೂಟರ್‌ಗಳು ಮುಂತಾದ ಎಂಟರ್‌ಪ್ರೈಸ್ ಉಪಕರಣಗಳನ್ನು ಪ್ರೋತ್ಸಾಹಿಸಲಿವೆ ಎಂದು ಸಂವಹನ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ತಯಾರಕರು, ಉದ್ಯಮದ ಮುಖಂಡರು ಮತ್ತು ಸಂಘಗಳಂತಹ ಮಧ್ಯಸ್ಥಗಾರರೊಂದಿಗೆ ವ್ಯಾಪಕ ಸಮಾಲೋಚನೆಯ ನಂತರ ಈ ಯೋಜನೆಯನ್ನು ಅಂತಿಮಗೊಳಿಸಲಾಯಿತು.
50 ಸಾವಿರ ಕೋಟಿ ರೂ.ಗಳಿಗಿಂತ ಹೆಚ್ಚಿನ ಮೌಲ್ಯದ ಟೆಲಿಕಾಂ ಉಪಕರಣಗಳ ಆಮದನ್ನು ಸರಿದೂಗಿಸುವುದು ಮತ್ತು ದೇಶೀಯ ಮಾರುಕಟ್ಟೆಗಳು ಮತ್ತು ರಫ್ತುಗಳಿಗಾಗಿ "ಮೇಡ್ ಇನ್ ಇಂಡಿಯಾ" ಉತ್ಪನ್ನಗಳೊಂದಿಗೆ ಅದನ್ನು ಬಲಪಡಿಸುವುದು ಈ ಯೋಜನೆಯ ಪ್ರಮುಖ ಅಂಶವಾಗಿದೆ. ಇದು 2021ರ ಏಪ್ರಿಲ್ 1ರಿಂದ ಕಾರ್ಯರೂಪಕ್ಕೆ ಬರಲಿದೆ. ಟೆಲಿಕಾಂ ಕ್ಷೇತ್ರದಲ್ಲಿ ಎಂಎಸ್‌ಎಂಇಗಳು ಪ್ರಮುಖ ಪಾತ್ರ ವಹಿಸಿ ರಾಷ್ಟ್ರೀಯ ಚಾಂಪಿಯನ್‌ಗಳಾಗಿ ಹೊರಬರುವ ಗುರಿಯನ್ನು ಸರ್ಕಾರ ಹೊಂದಿದೆ.