ಕರ್ನೂಲು(ಆಂಧ್ರ ಪ್ರದೇಶ): ಬಸ್ಸು ಮತ್ತು ಟ್ರಕ್ ಮಧ್ಯೆ ಢಿಕ್ಕಿ ಸಂಭವಿಸಿ 14 ಮಂದಿ ಮೃತಪಟ್ಟು ನಾಲ್ವರು ಗಾಯಗೊಂಡಿರುವ ಘಟನೆ ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ವೆಲ್ದುರ್ಥಿ ಮಂಡಲ್ ನ ಮಾದಾರ್ಪುರ ಗ್ರಾಮದಲ್ಲಿ ಭಾನುವಾರ ನಸುಕಿನ ಜಾವ ಸಂಭವಿಸಿದೆ.
ಗಾಯಗೊಂಡವರನ್ನು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಚಿತ್ತೂರು ಜಿಲ್ಲೆಯ ಮದನಪಲ್ಲೆಯಿಂದ ಅಜ್ಮೀರ್ ದರ್ಗಾಕ್ಕೆ 18 ಮಂದಿ ಮಿನಿಬಸ್ಸಿನಲ್ಲಿ ಯಾತ್ರೆ ಹೊರಟಿದ್ದರು. ನಿಯಂತ್ರಣ ಕಳೆದುಕೊಂಡ ಬಸ್ಸು ರಸ್ತೆಯ ವಿಭಜಕಕ್ಕೆ ಢಿಕ್ಕಿ ಹೊಡೆದು ಮತ್ತೊಂದು ಬದಿಗೆ ಬಿದ್ದು ಎದುರಿನಿಂದ ಬರುತ್ತಿದ್ದ ಟ್ರಕ್ ಗೆ ಢಿಕ್ಕಿ ಹೊಡೆಯಿತು.
ಅಪಘಾತದ ತೀವ್ರತೆ ಎಷ್ಟರಮಟ್ಟಿಗೆ ಇತ್ತೆಂದರೆ ಬಸ್ಸು ಸಂಪೂರ್ಣ ಜಖಂ ಆಗಿದ್ದು ಬಸ್ಸಿನಲ್ಲಿದ್ದ 18 ಮಂದಿಯಲ್ಲಿ 14 ಮಂದಿ ಸ್ಥಳದಲ್ಲಿಯೇ ಮೃತಪಟ್ಟರು. ಮಿನಿ ಬಸ್ಸಿನಲ್ಲಿ 8 ಮಹಿಳೆಯರು, ಐವರು ಪುರುಷರು ಮತ್ತು ಒಬ್ಬ ಬಾಲಕ ಇದ್ದನು. ಇವರ ಪರಿಚಯವನ್ನು ಪತ್ತೆ ಹಚ್ಚಬೇಕಿದೆ. ಉಳಿದವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪೊಲೀಸರಿಗೆ ಮಾಹಿತಿ ಸಿಕ್ಕಿದ ತಕ್ಷಣ ಸ್ಥಳಕ್ಕೆ 108 ತುರ್ತು ವಾಹನದೊಂದಿಗೆ ಆಗಮಿಸಿದರು. ಗಾಯಗೊಂಡವರನ್ನು ಕರ್ನೂಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ತನಿಖೆಯಿಂದ, ಮಿನಿಬಸ್ಸು ವೇಗವಾಗಿದ್ದು ಚಾಲಕನಿಗೆ ಗಾಡಿ ಓಡಿಸುವಾಗ ನಿದ್ದೆಯ ಮಂಪರು ಬಂದು ವಿಭಜಕಕ್ಕೆ ಢಿಕ್ಕಿ ಹೊಡೆದಿರಬೇಕು ಎಂದು ಹೇಳಲಾಗುತ್ತಿದೆ.
ಕರ್ನೂಲು ಜಿಲ್ಲಾಧಿಕಾರಿ ಜಿ ವೀರಪಂಡಿಯನ್ ಮತ್ತು ಎಸ್ಪಿ ಫಕೀರಪ್ಪ ಅಪಘಾತ ಸಂಭವಿಸಿದ ಸ್ಥಳಕ್ಕೆ ಧಾವಿಸಿದ್ದು ಪರಿಸ್ಥಿತಿ ಅವಲೋಕಿಸಿದರು.ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಮುಖ್ಯಮಂತ್ರಿ ಆಘಾತ: ಅಪಘಾತ ವಿಷಯ ಕೇಳಿದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ಕೊಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.
ಆಂಧ್ರಪ್ರದೇಶ ರಾಜ್ಯಪಾಲ ಬಿಸ್ವಭೂಷಣ್ ಹರಿಚಂದನ್ ಸಹ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.