ಚಂಡೀಗಢ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಕಳೆದ ಎರಡು ತಿಂಗಳಿನಿಂದ ರೈತರು ಆಂದೋಲನ ನಡೆಸುತ್ತಿದ್ದು ಇದೀಗ ಫೆಬ್ರವರಿ 18ರಂದು ರಾಷ್ಟ್ರವ್ಯಾಪಿ ರೈಲು ತಡೆ ನಡೆಸುವುದಾಗಿ ಪ್ರತಿಭಟನಾ ರೈತರ ಮುಖಂಡರು ಪ್ರಕಟಿಸಿದ್ದಾರೆ.
ಸಿಂಘು ಗಡಿಯಲ್ಲಿ ಎಲ್ಲ ರೈತ ಮುಖಂಡರು ಭಾಗಿಯಾಗಿರುವ ಸಂಯುಕ್ತಾ ಕಿಸಾನ್ ಮೋರ್ಚಾದ ಸಭೆಯ ನಂತರ ಮಾತನಾಡಿದ ಕ್ರಾಂತಿಕಾರಿ ಕಿಸಾನ್ ಯೂನಿಯನ್ ಪಂಜಾಬ್ ಅಧ್ಯಕ್ಷ ಡಾ. ದರ್ಶನ್ ಪಾಲ್ ಚಳವಳಿಯನ್ನು ತೀವ್ರಗೊಳಿಸಲು ನಾಲ್ಕು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಫೆಬ್ರವರಿ 18ರಂದು ರೈಲು ತಡೆ ಕಾರ್ಯಕ್ರಮಗಳನ್ನು ದೇಶಾದ್ಯಂತ ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ನಡೆಸಲಾಗುವುದು ಎಂದರು. ಅಲ್ಲದೆ ಫೆಬ್ರವರಿ 12ರಿಂದ ರಾಜಸ್ಥಾನದ ಎಲ್ಲಾ ರಸ್ತೆ ಟೋಲ್ ಪ್ಲಾಜಾಗಳನ್ನು ಪಂಜಾಬ್ ಮತ್ತು ಹರಿಯಾಣ ಮಾದರಿಯಲ್ಲಿ ಟೋಲ್-ಫ್ರೀ ಮಾಡಲಾಗುವುದು ಎಂದರು.
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ತ್ಯಾಗದ ನೆನಪಿಗಾಗಿ ಫೆಬ್ರವರಿ 14ರಂದು ದೇಶಾದ್ಯಂತ ಕ್ಯಾಂಡಲ್ ಮಾರ್ಚ್ ಮತ್ತು ಟಾರ್ಚ್ ಮೆರವಣಿಗೆ ಆಯೋಜಿಸಲಾಗುವುದು. ಫೆಬ್ರವರಿ 16ರಂದು ರೈತರು ಸರ್ ಛೋಟು ರಾಮ್ ಜನ್ಮ ದಿನಾಚರಣೆಯನ್ನು ಆಚರಿಸಲಾಗುವುದು ಎಂದು ಪಾಲ್ ಹೇಳಿದ್ದಾರೆ.
ಸಿಂಘು ಗಡಿಯಲ್ಲಿ ಪ್ರತಿಭಟನಾ ನಿರತ ರೈತರನ್ನುದ್ದೇಶಿಸಿ ಮಾತನಾಡಿರುವ ರಾಕೇಶ್ ಟಿಕಾಯತ್ " ಕೇಂದ್ರದಲ್ಲಿ ಅಧಿಕಾರ ಬದಲಾವಣೆ ಮಾಡುವುದು ಪ್ರತಿಭಟನಾ ನಿರತ ರೈತರ ಗುರಿಯಾಗಿಲ್ಲ. ಬದಲಾಗಿ ರೈತರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದಾಗಿದೆ ಎಂದು ಹೇಳಿದ್ದಾರೆ.