ನವದೆಹಲಿ: ದೇಶದಲ್ಲಿ ಕೋವಿಡ್ -19 ವಿರುದ್ಧ ಸುಮಾರು 18 ರಿಂದ 19 ಲಸಿಕೆಗಳು ಸಿದ್ಧವಾಗುತ್ತಿದ್ದು, ಅವು ಕ್ಲಿನಿಕಲ್ ಪ್ರಯೋಗದ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಸೋಮವಾರ ಹೇಳಿದ್ದಾರೆ.
ನಿನ್ನೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು, ಮುಂದಿನ 2-3 ವಾರಗಳಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೋವಿಡ್-19 ಲಸಿಕೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಇದೇ ವೇಳೆ, ಭಾರತದಿಂದ 20 ರಿಂದ 25 ದೇಶಗಳಿಗೆ ಕೊರೋನಾ ಲಸಿಕೆಯನ್ನು ಸರಬರಾಜು ಮಾಡುವ ಯೋಜನೆ ಇದೆ ಎಂದು ಅವರು ಹೇಳಿದರು.
ದೇಶದಲ್ಲಿ ಕಳೆದ ಏಳು ದಿನಗಳಿಂದ 188 ಜಿಲ್ಲೆಗಳಲ್ಲಿ ಯಾವುದೇ ಹೊಸ ಕೊರೋನಾ ಪ್ರಕರಣಗಳು ದಾಖಲಾಗಿಲ್ಲ. 21 ದಿನಗಳಿಂದ 21 ಜಿಲ್ಲೆಗಳಲ್ಲಿ ಶೂನ್ಯ ಕೊರೋನಾ ಪ್ರಕರಣ ದಾಖಲಾಗಿದೆ ಎಂದರು. ಆದರೆ ಕೊರೋನಾ ಸೋಂಕು ತಗ್ಗುತ್ತಿದೆ ಎಂದು ಮೈ ಮರೆಯಬೇಡಿ. ಕೊರೋನಾ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ ಎಂದು ಸಚಿವರು ಮನವಿ ಮಾಡಿದ್ದಾರೆ.