ಬೆಂಗಳೂರು: ಕೇರಳದಿಂದ ಬೆಂಗಳೂರಿಗೆ ಬರುವವರು ಕೋವಿಡ್-19 ನೆಗೆಟಿವ್ ವರದಿ ನೀಡುವುದನ್ನು ಬಿಬಿಎಂಪಿ ಕಡ್ಡಾಯಗೊಳಿಸಿದೆ. ಇಲ್ಲದಿದ್ದರೆ ಅವರಿಗೆ ನಗರಕ್ಕೆ ಪ್ರವೇಶಾವಕಾಶ ನೀಡುವುದಿಲ್ಲ. ನಗರದಲ್ಲಿ ಸೋಮವಾರ ಅನೇಕ ಕೋವಿಡ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅದು ಈ ಕ್ರಮ ತೆಗೆದುಕೊಂಡಿದೆ. ಬೆಂಗಳೂರಿನಲ್ಲಿ ಎರಡನೆಯ ಅಲೆಯ ಭೀತಿ ಎದುರಾಗಿರುವುದರಿಂದ ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.
ಕೋವಿಡ್ ನೆಗೆಟಿವ್ ವರದಿ ಇಲ್ಲದ ಜನರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಸೋಮವಾರ ಎಚ್ಚರಿಕೆ ನೀಡಿದ್ದಾರೆ.
ಕೋವಿಡ್ 19 ಪ್ರಕರಣಗಳ ಸಂಖ್ಯೆಯನ್ನು ನಿಯಂತ್ರಿಸಲು ಕಟ್ಟೆಚ್ಚರವನ್ನು ಮತ್ತಷ್ಟು ಬಿಗಿಗೊಳಿಸುವಂತೆ ಮಾರ್ಷಲ್‌ಗಳಿಗೆ ಮತ್ತು ನಿವಾಸಿ ಕಲ್ಯಾಣ ಸಂಸ್ಥೆಗಳ ಜತೆ ಕೆಲಸ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರತಿ ಕೋವಿಡ್ ಪ್ರಕರಣದ ಮೇಲೆಯೂ ಕಣ್ಣಿಟ್ಟಿರುವಂತೆ ಹಾಗೂ ಅದರ ಬಗ್ಗೆ ಕೂಡಲೇ ಮಾಹಿತಿ ನೀಡುವಂತೆ ಆರ್‌ಡಬ್ಲ್ಯೂಗಳಿಗೆ ಸೂಚನೆ ನೀಡಲಾಗಿದೆ.
ಮಂಜುಶ್ರೀ ನರ್ಸಿಂಗ್ ಕಾಲೇಜ್‌ನ 210 ವಿದ್ಯಾರ್ಥಿಗಳ ಪೈಕಿ ಕೇರಳ ಮೂಲದ 40 ವಿದ್ಯಾರ್ಥಿಗಳಲ್ಲಿ ಕೋವಿಡ್ ಸೊಂಕು ಕಾಣಿಸಿಕೊಂಡಿದೆ. ಅಲ್ಲದೆ, ಬೊಮ್ಮನಹಳ್ಳಿ ವಲಯದ ಅಪಾರ್ಟ್‌ಮೆಂಟ್ ಒಂದರಲ್ಲಿ 56 ನಿವಾಸಿಗಳಲ್ಲಿ ಸೋಂಕು ಪತ್ತೆಯಾಗಿದೆ. ಈ ಎರಡೂ ಪ್ರಕರಣಗಳಲ್ಲಿ ಸೋಂಕು ವ್ಯಾಪಕವಾಗಿ ಹರಡಿರುವುದರಿಂದ ಬಿಬಿಎಂಪಿ ಸೋಮವಾರ ತುರ್ತು ಸಭೆ ನಡೆಸಿ ಈ ತೀರ್ಮಾನ ತೆಗೆದುಕೊಂಡಿದೆ.