ಬೆಂಗಳೂರು: ಭಾರತಕ್ಕೆ ಶೀಘ್ರವೇ ಮತ್ತೆರಡು ಕೋವಿಡ್-19 ಲಸಿಕೆಗಳು ದೊರೆಯುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಫೆ.05 ರಂದು ಕೋವಿಡ್-19 ಲಸಿಕೆ ವಿಷಯಗಳು ಹಾಗೂ ಆತಂಕಗಳ ಬಗ್ಗೆ ನಡೆದ ಸಭೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
ರಷ್ಯಾದ ಸ್ಪುಟ್ನಿಕ್ V, ಝೈಡಸ್ ಕ್ಯಾಡಿಲಾ ಭಾರತಕ್ಕೆ ಸಿಗಬಹುದಾಗಿರುವ ಮೂರನೇ ಹಾಗೂ ನಾಲ್ಕನೇ ಲಸಿಕೆಗಳಾಗಿವೆ. ಕರ್ನಾಟಕದ ಕೋವಿಡ್-19 ಟಾಸ್ಕ್ ಫೋರ್ಸ್ ನ ನೋಡಲ್ ಅಧಿಕಾರಿ ಡಾ. ವಿ ರವಿ, ಕೋವಿಡ್-19 ಸಲಹಾ ತಂಡಾದ ಸದಸ್ಯ ಡಾ.ವಿಶಾಲ್ ರಾವ್, ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯ ಡಾ. ಎಂಕೆ ಸುದರ್ಶನ್, ಡಾ. ಲೋಕೇಶ್ ಎ, ಡಬ್ಲ್ಯುಹೆಚ್ಒ ಭಾರತದ ಪ್ರಾದೇಶಿಕ ಟೀಂ ಲೀಡರ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಸಚ್ಚಿದಾನಂದ್ ಚರ್ಚೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳಾಗಿದ್ದಾರೆ.
ಹೊಸ ಲಸಿಕೆಗಳ ಬಗ್ಗೆ ಮಾತನಾಡಿರುವ ಡಾ. ರವಿ ರಷ್ಯಾದ ಸ್ಪುಟ್ನಿಕ್ V ಮೂರನೇ ಹಂತದ ಟ್ರಯಲ್ ನಲ್ಲಿದೆ, ಝೈಡಸ್ ಕ್ಯಾಡಿಲಾ 2 ನೇ ಹಂತದ ಟ್ರಯಲ್ ನಲ್ಲಿದೆ ಟ್ರಯಲ್ ಮುಗಿದ ಬೆನ್ನಲ್ಲೇ ಭಾರತ ಅವುಗಳನ್ನು ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಲಸಿಕೆ ಪಡೆಯುವುದರ ಬಗ್ಗೆ ಇರುವ ಆತಂಕಗಳತ್ತ ಗಮನ ಹರಿಸಿ, ಭಯ ಹೋಗಲಾಡಿಸಬೇಕಿರುವುದರ ಬಗ್ಗೆಯೂ ತಜ್ಞರು ಚರ್ಚೆ ನಡೆಸಿದ್ದಾರೆ. ಪ್ರತಿ ಬಾರಿ ಹೊಸ ಲಸಿಕೆಗಳು ಬಂದಾಗಲೂ ಜನರಲ್ಲಿ ಭಯ, ಆತಂಕಗಳಿರುತ್ತವೆ, ಸಿಡುಬು, ದಡಾರ, ಬಿಸಿಜಿ ಮತ್ತು ಪೋಲಿಯೊ ಲಸಿಕೆ ಬಂದಾಗಲೂ ಜನ ಪ್ರಾರಂಭದಲ್ಲಿ ಆತಂಕಗೊಂಡು ಲಸಿಕೆ ತೆಗೆದುಕೊಳ್ಳಲು ಮುಂದಾಗುತ್ತಿರಲಿಲ್ಲ, ಈಗ ಕೋವಿಡ್-19 ಗೆ ಹಾಗೆಯೇ ಆಗಿದೆ ಎಂದು ತಜ್ಞರು ಹೇಳಿದ್ದಾರೆ.
ಕೋವಿಡ್-19 ಲಸಿಕೆಯನ್ನು ಒಂದೇ ವರ್ಷದಲ್ಲಿ ಅಭಿವೃದ್ಧಿಪಡಿಸಲಾಗಿರುವುದರಿಂದ ಜನತೆಯಲ್ಲಿ ಆತಂಕ ಮೂಡಿದೆ ಲಸಿಕೆಯ ಸುರಕ್ಷತೆ ಹಾಗೂ ಇಮ್ಯುನೊಜೆನೆಸಿಟಿ ಬಗ್ಗೆ ಜನತೆ ಪ್ರಶ್ನಿಸುತ್ತಿದ್ದಾರೆ ಎಂದು ಡಾ. ಸುದರ್ಶನ್ ಹೇಳಿದ್ದಾರೆ. ಆಸ್ಪತ್ರೆಯ ಮುಖ್ಯಸ್ಥರು, ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರು ಲಸಿಕೆ ಪಡೆಯುವ ಮೂಲಕ ಮಾದರಿಯಾಗಿ ಜನರಲ್ಲಿರುವ ಆತಂಕಗಳನ್ನು ಹೋಗಲಾಡಿಸಬಹುದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೋವಿಡ್-19 ಸಲಹಾ ತಂಡಾದ ಸದಸ್ಯ ಡಾ.ವಿಶಾಲ್ ರಾವ್ ಮಾತನಾಡಿದ್ದು, ತಮಗೂ ಸಹ ಪ್ರಾರಂಭದಲ್ಲಿ ಲಸಿಕೆ ಕುರಿತು ಸ್ವಲ್ಪ ಹಿಂಜರಿಕೆ ಇತ್ತು. ಈ ಹಿಂದೆ ಭಾರತೀಯ ಲಸಿಕೆಗಳ ಕುರಿತಂತೆ ಡಾಟಾ ಕೊರತೆ ಎದುರಾಗಿತ್ತು. ಈಗ ಲ್ಯಾನ್ಸೆಟ್ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಹಲವು ನಿಯತಕಾಲಿಕೆಗಳು ಭಾರತದ ಲಸಿಕೆಗಳ ಕುರಿತು ವರದಿ ಪ್ರಕಟಿಸುತ್ತಿದ್ದು ಪರಿಣಾಮಕಾರಿ ಲಸಿಕೆ ಎಂಬುದು ಸಾಬೀತಾಗಿದೆ ಶೀಘ್ರವೇ ನಾನೂ ಲಸಿಕೆ ಪಡೆಯುತ್ತೇನೆ, ನೋಂದಣಿ ಮಾಡಿಸುತ್ತೇನೆ ಎಂದು ಹೇಳಿದ್ದಾರೆ.