ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಖಾಸಗೀಕರಣವನ್ನು ವಿರೋಧಿಸಿ ಬ್ಯಾಂಕ್ ಒಕ್ಕೂಟಗಳ ಸಂಯುಕ್ತ ವೇದಿಕೆ ಯುನೈಟೆಡ್ ಪೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್ ಬಿಯು) ಮಾರ್ಚ್ -15, 16 ರಂದು 2 ದಿನಗಳ ಮುಷ್ಕರಕ್ಕೆ ಕರೆ ನೀಡಿದೆ.
ಬಂಡವಾಳ ಹಿಂತೆಗೆತ ಯೋಜನೆಯಡಿ, ಎರಡು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಖಾಸಗೀಕರಣಕ್ಕೆ ಮುಕ್ತ ಮಾಡಲಾಗುವುದು ಎಂದು ಫೆ.1 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ಘೋಷಿಸಿದ್ದರು.
ಸರ್ಕಾರ ಐಡಿಬಿಐ ಬ್ಯಾಂಕ್ ನಲ್ಲಿದ್ದ ತನ್ನ ಬಹುಪಾಲು ಷೇರುಗಳನ್ನು 2019 ರಲ್ಲಿ ಎಲ್ ಐಸಿಗೆ ಮಾರಾಟ ಮಾಡಿ ಖಾಸಗೀಕರಣಗೊಳಿಸಿತ್ತು. 4 ವರ್ಷಗಳಲ್ಲಿ 14 ಪಬ್ಲಿಕ್ ಸೆಕ್ಟರ್ ಬ್ಯಾಂಕ್ ಗಳನ್ನು ವಿಲೀನಗೊಳಿಸಲಾಗಿದೆ.
"ಬ್ಯಾಂಕ್ ಗಳನ್ನು ಖಾಸಗೀಕರಣಗೊಳಿಸುವ ಸರ್ಕಾರದ ನಿರ್ಧಾರವನ್ನು ಪ್ರತಿಭಟಿಸಲು ಫೆ.09 ರಂದು ನಡೆದ ಯುಎಫ್ ಬಿಯು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘಟನೆ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿಹೆಚ್ ವೆಂಕಟಾಚಲಂ ಹೇಳಿದ್ದಾರೆ.
" ಐಡಿಬಿಐ ಬ್ಯಾಂಕ್ ಹಾಗೂ ಇನ್ನೆರಡು ಬ್ಯಾಂಕ್ ಗಳ ಖಾಸಗೀಕರಣ, ಬ್ಯಾಡ್ ಬ್ಯಾಂಕ್ ಸ್ಥಾಪನೆ, ಎಲ್‌ಐಸಿಯಲ್ಲಿ ಬಂಡವಾಳ ಹಿಂತೆಗೆತ, ವಿಮೆ ಸಂಸ್ಥೆಯ ಖಾಸಗೀಕರಣ, ವಿಮೆ ಕ್ಷೇತ್ರದಲ್ಲಿ ಶೇ.74 ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ ಸೇರಿದಂತೆ ಕೇಂದ್ರ ಬಜೆಟ್ ನ ಘೋಷಣೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು" ಎಂದು ವೆಂಕಟಾಚಲಂ ಮಾಹಿತಿ ನೀಡಿದ್ದಾರೆ.