ನವದೆಹಲಿ: ರಫೇಲ್ ಯುದ್ಧ ವಿಮಾನ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದ್ದು ಚೀನಾ ದೇಶದ ಸೈನಿಕರಲ್ಲಿ ಆತಂಕ, ಭಯವನ್ನುಂಟುಮಾಡಿದೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಆರ್ ಕೆಎಸ್ ಬದೌರಿಯಾ ತಿಳಿಸಿದ್ದಾರೆ.
ಪೂರ್ವ ಲಡಾಕ್ ಗೆ ಹತ್ತಿರದ ಪ್ರದೇಶದಲ್ಲಿ ಜೆ-20 ಯುದ್ಧ ವಿಮಾನವನ್ನು ತರಲಾಗಿದೆ. ಭಾರತೀಯ ವಾಯುಪಡೆಗೆ ಯಾವಾಗ ರಫೇಲ್ ಯುದ್ಧ ವಿಮಾನ ಸೇರ್ಪಡೆಯಾಯಿತೋ ಅಲ್ಲಿಂದ ಜೆ-20 ವಿಮಾನವನ್ನು ಗಡಿಭಾಗದಲ್ಲಿ ಚೀನಾ ಪಡೆ ಇರಿಸಿದೆ. ನಮಗೆ ಚೀನಾ ಸೈನ್ಯದ ಸಾಮರ್ಥ್ಯ ಮತ್ತು ಕಾರ್ಯವಿಧಾನ ಬಗ್ಗೆ ತಿಳಿದಿದೆ, ನಾವು ಅವುಗಳನ್ನು ಎದುರಿಸಲು ಸಮರ್ಥರಾಗಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಾರತ-ಚೀನಾ ಗಡಿಭಾಗದಲ್ಲಿ ಸೇನೆ ನಿಯೋಜನೆ ಬಗ್ಗೆ ಮಾತುಕತೆ ಮುಂದುವರಿದಿದೆ. ಮಾತುಕತೆ ಹೇಗೆ ಮುಂದುವರಿಯುತ್ತದೆ ಎಂಬುದರ ಮೇಲೆ ಎಲ್ಲವೂ ನಿಂತಿದೆ. ಸಾಕಷ್ಟು ಗಮನವನ್ನು ಅದಕ್ಕೆ ನೀಡಲಾಗಿದ್ದು, ಸೇನೆಯ ಹಿಂಪಡೆಯುವಿಕೆ ಆರಂಭಗೊಂಡರೆ ಉತ್ತಮ. ಅದು ನಡೆಯದಿದ್ದರೆ ಅಥವಾ ಏನಾದರೊಂದು ಹೊಸದು ಘಟನೆ ಗಡಿಯಲ್ಲಿ ಸಂಭವಿಸಿದರೂ ಕೂಡ ನಾವು ಅದನ್ನು ಎದುರಿಸಲು ಸಜ್ಜಾಗಿದ್ದೇವೆ ಎಂದರು.
ಚೀನಾದ ಕಡೆಯಿಂದ ವಾಯುಪಡೆ ನಿಯೋಜನೆಯಲ್ಲಿ ಕೆಲವು ಬದಲಾವಣೆ ಮಾಡಲಾಗಿದ್ದು, ಕೆಲವು ಪಡೆಯನ್ನು ಹಿಂತೆಗೆದುಕೊಂಡಿದೆ. ಆದರೆ ವಾಯು ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ಬದಲಾವಣೆಯನ್ನು ಅದಕ್ಕೆ ಪ್ರತಿಯಾಗಿ ಚೀನಾ ಮಾಡಿದೆ. ಅದರರ್ಥ ವಾಯುಪಡೆ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ ಎಂದಲ್ಲವೇ ಎಂದು ಆರ್ ಕೆಎಸ್ ಬದೌರಿಯಾ ಪ್ರಶ್ನಿಸಿದರು.