ನವದೆಹಲಿ: 'ಮಾದಕ ವಸ್ತುಗಳ (ಡ್ರಗ್ಸ್) ವಿಪರೀತ ಸೇವನೆಯಿಂದ ಭಾರತದಲ್ಲಿ 2017-2019ರ ನಡುವೆ 2,300 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ನತದೃಷ್ಟರಲ್ಲಿ 30-45 ವಯಸ್ಸಿನವರೇ ಅಧಿಕ' ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ತಿಳಿಸಿದೆ.
'2017ರಲ್ಲಿ 745, 2018ರಲ್ಲಿ 875 ಮತ್ತು 2019ರಲ್ಲಿ 704 ಮಂದಿ ಅತಿಯಾದ ಡ್ರಗ್ಸ್ ಸೇವನೆಯಿಂದ ಮೃತಪಟ್ಟಿದ್ದಾರೆ. ರಾಜಸ್ಥಾನ(338), ಕರ್ನಾಟಕ(239) ಮತ್ತು ಉತ್ತರ ಪ್ರದೇಶದಲ್ಲಿ(236) ಅತಿ ಹೆಚ್ಚು ಸಾವು ಸಂಭವಿಸಿದೆ' ಎಂದು ಬ್ಯೂರೋ ಹೇಳಿದೆ.
'30-45 ವರ್ಷದೊಳಗಿನ 784 ಮಂದಿ ಈ ಮೂರು ವರ್ಷಗಳ ಅವಧಿಯಲ್ಲಿ ಮೃತಪಟ್ಟಿದ್ದರೆ, 14 ವಯಸ್ಸಿಗಿಂತ ಕೆಳಗಿನ 55 ಮಕ್ಕಳು, 14-18 ವಯಸ್ಸಿನೊಳಗಿನ 70 ಮಂದಿ ಸಾವಿಗೀಡಾಗಿದ್ದಾರೆ. 18-30 ವರ್ಷದೊಳಗಿನ 624 ಮಂದಿ, 45-60 ವಯಸ್ಸಿನ 550 ಮಂದಿ ಹಾಗೂ 60 ವರ್ಷಕ್ಕಿಂತ ಮೇಲಿನ 241 ಮಂದಿ ಡ್ರಗ್ಸ್‌ಗೆ ಬಲಿಯಾಗಿದ್ದಾರೆ' ಎಂದು ತಿಳಿಸಲಾಗಿದೆ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಡ್ರಗ್ಸ್ ಪೀಡಿತ 272 ಜಿಲ್ಲೆಗಳಲ್ಲಿ 'ನಶಾ ಮುಕ್ತ ಭಾರತ ಅಭಿಯಾನ'ವನ್ನು(ಎನ್‌ಎಂಬಿಎ) ಆರಂಭಿಸಿದೆ. ಈ ಅಭಿಯಾನವು ಮೂರು ಹಂತಗಳಲ್ಲಿ ನಡೆಯಲಿದೆ. ಮಾದಕವಸ್ತು ನಿಯಂತ್ರಣ ಇಲಾಖೆಯು ಡ್ರಗ್ಸ್‌ಜಾಲ ನಿಯಂತ್ರಣ, ಸಾಮಾಜಿಕ ನ್ಯಾಯದ ಇಲಾಖೆಯು ಜನರಲ್ಲಿ ಮಾದಕದ್ರವ್ಯದ ಬಗ್ಗೆ ಜಾಗೃತಿ ಮತ್ತು ಆರೋಗ್ಯ ಇಲಾಖೆಯು ಪೀಡಿತರಿಗೆ ಚಿಕಿತ್ಸೆಯನ್ನು ನೀಡಲಿದೆ.
'ಎನ್‌ಎಪಿಡಿಡಿಆರ್ ಯೋಜನೆಯಡಿ 'ನಶಾ ಮುಕ್ತ ಭಾರತ ಅಭಿಯಾನ'ವನ್ನು ಇನ್ನಷ್ಟು ಬಲಿಷ್ಠಗೊಳಿಸಲಾಗುವುದು. ಈ ಯೋಜನೆಯಡಿ ಡ್ರಗ್ಸ್ ವಿರುದ್ಧ ಹೋರಾಡಲು 272 ಜಿಲ್ಲೆಗಳಲ್ಲಿ 13,000 ಯುವ ಸ್ವಯಂಸೇವಕರನ್ನು ನೇಮಿಸಲಾಗುವುದು. 2021-22 ನೇ ಆರ್ಥಿಕ ವರ್ಷದಲ್ಲಿ 11.80 ಲಕ್ಷ ಮಂದಿ ಈ ಯೋಜನೆಯ ಲಾಭವನ್ನು ಪಡೆಯಲಿದ್ದಾರೆ' ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.