ವುಹಾನ್: 2019ರ ಡಿಸೆಂಬರ್ ತಿಂಗಳಿಗೂ ಮುಂಚೆ ಚೀನಾದ ಕೇಂದ್ರ ಭಾಗ ವುಹಾನ್ ನಿಂದ ಕೋವಿಡ್-19 ಸಾಂಕ್ರಾಮಿಕ ರೋಗ ಹರಡಿದೆ ಎಂಬುದನ್ನು ನಿರ್ಧರಿಸುವ ಸಾಕ್ಷ್ಯಧಾರಗಳ ಕೊರತೆ ಇರುವುದಾಗಿ ಡಬ್ಲ್ಯೂಎಚ್ ಒ ಹಾಗೂ ಚೀನಾದ ಎಕ್ಸ್ ಪರ್ಟ್ ಮಿಷನ್ ಮಂಗಳವಾರ ಹೇಳಿವೆ.
2019ರ ಡಿಸೆಂಬರ್ ತಿಂಗಳಿಗೂ ಮುಂಚಿನ ಅವಧಿಯಲ್ಲಿ ಜನರಲ್ಲಿ ಸಾರ್ಸ್ -ಕೋವ್-2 ಜನರಲ್ಲಿ ಹರಡುವಿಕೆಯ ಯಾವುದೇ ಅಂಶಗಳು ಕಂಡುಬಂದಿಲ್ಲ ಎಂದು ಚೀನಾ ತಂಡ ಮುಖ್ಯಸ್ಥ ಲಿಯಾಂಗ್ ವಾನ್ನಿಯಾನ್ ಜಂಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು. ವುಹಾನ್ ನಗರದಿಂದ ಸೋಂಕು ಹರಡಿದೆ ಎಂಬುದನ್ನು ನಿರ್ಧರಿಸುವ ಸಾಕಷ್ಟು ಸಾಕ್ಷ್ಯಾಧಾರಗಳು ಕೂಡಾ ಸಿಕ್ಕಿಲ್ಲ ಎಂದು ಅವರು ಹೇಳಿದರು.10 ರಾಷ್ಟ್ರಗಳ ತಜ್ಞರನ್ನೊಳಗೊಂಡ ವಿಶ್ವ ಆರೋಗ್ಯ ಸಂಸ್ಥೆ ತಂಡ ಆಸ್ಪತ್ರೆಗಳು, ಸಂಶೋಧನಾ ಸಂಸ್ಥೆಗಳು, ಸಾಂಪ್ರಾದಾಯಿಕ ಮಾರುಕಟ್ಟೆ, ಮತ್ತಿತರ ಸ್ಥಳಗಳಿಗೆ ಭೇಟಿ ನೀಡಿತು.2019ರ ಕೊನೆಭಾಗದಲ್ಲಿ ವುಹಾನ್ ನಲ್ಲಿ ಮೊದಲ ಬಾರಿಗೆ ಕೋವಿಡ್ -19 ಪತ್ತೆಯಾಗಿತ್ತು. 11 ಮಿಲಿಯನ್ ಜನಸಂಖ್ಯೆ ಹೊಂದಿರುವ ವುಹಾನ್ ನಗರದಲ್ಲಿ ಸರ್ಕಾರ 76 ದಿನಗಳ ಕಠಿಣ ಲಾಕ್ ಡೌನ್ ಹೇರಿತ್ತು. ಆಗಿನಿಂದಲೂ ಚೀನಾದಲ್ಲಿ 89 ಸಾವಿರಕ್ಕೂ ಹೆಚ್ಚು ಸೋಂಕಿನ ಪ್ರಕರಣಗಳು ಮತ್ತು 4600 ಸಾವಿನ ಪ್ರಕರಣಗಳು ವರದಿಯಾಗಿವೆ.
ಚೀನಾದ ಈಶಾನ್ಯ ಭಾಗದಲ್ಲಿ ಹೊಸದಾಗಿ ಪ್ರಕರಣಗಳು ಕಂಡುಬಂದಿದ್ದು, ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಸ್ಥಳೀಯವಾಗಿ ಲಾಕ್ ಡೌನ್ ಮಾಡಲಾಗಿದ್ದು, ಪ್ರವಾಸವನ್ನು ನಿಬರ್ಂಧಿಸಲಾಗಿದೆ.