ನವದೆಹಲಿ: ಹಳೆಯ ಮತ್ತು ಅನರ್ಹ ವಾಹನಗಳನ್ನು ರಸ್ತೆಯಿಂದ ಹೊರಹಾಕಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಸ್ವಯಂಪ್ರೇರಿತ ವಾಹನ ಸ್ಕ್ರ್ಯಾಪಿಂಗ್ ನೀತಿಯನ್ನು ಪ್ರಕಟಿಸಿದರು.
ಈ ನೂತನ ನೀತಿಯ ಅನ್ವಯ ಖಾಸಗಿ ಬಳಕೆಯನ್ನು 20 ವರ್ಷಗಳಿಗೆ ಮತ್ತು ವಾಣಿಜ್ಯ ಬಳಕೆ ವಾಹನಗಳ ಬಳಕೆಯನ್ನು 20 ವರ್ಷಕ್ಕೆ ಮಿತಿಗೊಳಿಸಲಾಗಿದೆ. ವೈಯಕ್ತಿಕ ವಾಹನಗಳು 20 ವರ್ಷಗಳ ನಂತರ ಸ್ವಯಂಚಾಲಿತ ಕೇಂದ್ರಗಳಲ್ಲಿ ಕಡ್ಡಾಯವಾಗಿ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಬೇಕಿದೆ. ವಾಣಿಜ್ಯ ವಾಹನಗಳು 15 ವರ್ಷಗಳ ನಂತರ ಫಿಟ್ ನೆಸ್ ಪರೀಕ್ಷೆಗೆ ಒಳಗಾಗಬೇಕು ಎಂದು ಹೇಳಲಾಗಿದೆ.
ಈ ಬಗ್ಗೆ ಸಂಸತ್ ನಲ್ಲಿ ಬಜೆಟ್ ಮಂಡನೆ ವೇಳೆ ಮಾತನಾಡಿದ ನಿರ್ಮಲಾ ಸೀತಾರಾಮನ್ ಅವರು, 'ಹಳೆಯ ಮತ್ತು ಅನರ್ಹ ವಾಹನಗಳನ್ನು ರಸ್ತೆಗಳಿಂದ ಹೊರಹಾಕಲು ನಾವು ಸ್ವಯಂಪ್ರೇರಿತ ವಾಹನ ಸ್ಕ್ರ್ಯಾಪಿಂಗ್ ನೀತಿಯನ್ನು ಪ್ರತ್ಯೇಕವಾಗಿ ಪ್ರಕಟಿಸುತ್ತಿದ್ದೇವೆ. ಇದು ಇಂಧನ-ಸಾಮರ್ಥ್ಯ, ಪರಿಸರ ಸ್ನೇಹಿ ವಾಹನಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಆ ಮೂಲಕ ವಾಹನ ಮಾಲಿನ್ಯ ಮತ್ತು ಹೆಚ್ಚಿನ ತೈಲ ಬಳಕೆಯನ್ನು ಕಡಿಮೆ ಮಾಡುತ್ತದೆ" ಎಂದು ಹೇಳಿದರು.
"ವೈಯಕ್ತಿಕ ವಾಹನಗಳ ಬಳಕೆ ಸಂದರ್ಭದಲ್ಲಿ ಇವುಗಳ ಬಳಕೆಯನ್ನು 20 ವರ್ಷಗಳಿಗೆ ಮಿತಿಗೊಳಿಸಲಾಗಿದ್ದು, ವಾಣಿಜ್ಯ ವಾಹನಗಳ ಬಳಕೆಯನ್ನು 15 ವರ್ಷಗಳಿಗೆ ಮಿತಿಗೊಳಿಸಲಾಗಿದೆ. ಈ ಅವಧಿಯ ನಂತರ ಸ್ವಯಂಚಾಲಿತ ಫಿಟ್ನೆಸ್ ಕೇಂದ್ರಗಳಲ್ಲಿ ಫಿಟ್ನೆಸ್ ಪರೀಕ್ಷೆಗೆ ಒಳಗಾಗಬೇಕು ಎಂದು ಅವರು ಹೇಳಿದರು.
ಇದೇ ವೇಳೆ ಕೇಂದ್ರ ಸಚಿವರು ವಾಹನಗಳಿಗೆ ಸಿಎನ್‌ಜಿ ಒದಗಿಸುವ ನಗರ ಅನಿಲ ವಿತರಣಾ ಜಾಲ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದರು.