ನವದೆಹಲಿ: 2021-2022ನೇ ಸಾಲಿನ ಕೇಂದ್ರ ಬಜೆಟ್ ಸೋಮವಾರ ಮಂಡನೆಯಾಗುತ್ತಿದೆ. ಕೊರೋನಾ ಸಾಂಕ್ರಾಮಿ ರೋಗ ಹಿನ್ನೆಲೆ ತೀವ್ರ ಆರ್ಥಿಕ ಸಂಕಷ್ಟ, ನಿರುದ್ಯೋಗ ಹೆಚ್ಚಳ, ಕೃಷಿ ಉದ್ಯಮ, ರಫ್ತು, ವಾಹನೋದ್ಯಮ ಸೇರಿದಂತೆ ಪ್ರತಿಯೊಂದು ವಲಯವೂ ಋಣಾತ್ಮಕ ಬೆಳವಣಿಗೆ ದಾಖಲಿಸಿದ್ದು, ಸಾಲು ಸಾಲು ಸವಾಲುಗಳ ನಡುವಲ್ಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡುತ್ತಿದ್ದಾರೆ.
ಬಜೆಟ್ ಮಂಡನೆಗೂ ಮುನ್ನ ಇಂದು ಬೆಳಿಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ತಮ್ಮ ತಂಡದೊಂದಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿದರು. ಬಳಿಕ ನಿರ್ಮಲಾ ಸೀತಾರಾಮನ್ ಹಾಗೂ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಅಲ್ಲಿಂದ ಸಂಪುಟ ಸಭೆಗೆ ತೆರಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಬಜೆಟ್'ಗೆ ಅನುಮೋದನೆ ಪಡೆದುಕೊಳ್ಳಲಾಯಿತು.
ಹಣಕಾಸು ಸಚಿವೆಯಾದ ಬಳಿಕ ನಿರ್ಮಲಾ ಸೀತಾರಾಮನ್ ಅವರು ಮಂಡನೆ ಮಾಡುತ್ತಿರುವ ಮೂರನೇ ಬಜೆಟ್ ಇದಾಗಿದೆ.
ಲೋಕಸಭೆಯಲ್ಲಿ ಬಜೆಟ್ ಆರಂಭಿಸಿದ ನಿರ್ಮಲಾ ಸೀತಾರಾಮನ್ ಅವರು, ಜಾಗತಿಕ ಆರ್ಥಿಕತೆ ಈಗಾಗಲೇ ಕುಸಿಯತೊಡಗಿದೆ. ಎಂದೂ ಕಂಡರಿಯದ ಕೋವಿಡ್ ಕಾಲದಲ್ಲಿ ಬಜೆಟ್ ಮಂಡನೆಯಾಗುತ್ತಿದೆ. ದೇಶದಲ್ಲಿ ಲಾಕ್ ಡೌನ್ ಜಾರಿಗೊಳಿಸದಿದ್ದಲ್ಲಿ ಹೆಚ್ಚಿನ ಸಮಸ್ಯೆ ಎದುರಿಸಬೇಕಾಗುತ್ತಿತ್ತು. ಪಿಎಜಿವೈ ಮೂಲಕ ಆರ್ಥಿಕ ನೆರವು ನೀಡಲಾಗಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಹಲವರು ತಮ್ಮ ಮನೆಯನ್ನು ಕಳೆದುಕೊಂಡಿದ್ದಾರೆ. ಮೇ-2020ರಂದು ಆತ್ಮನಿರ್ಭರ ಯೋಜನೆಯನ್ನು ಘೋಷಿಸಿದ್ದೇವೆ. ಏತನ್ಮಧ್ಯೆ 5 ಮಿನಿ ಬಜೆಟ್ ಮಂಡಿಸಲಾಗಿತ್ತು. ಕೋವಿಡ್ ಮಹಾಮಾರಿ ನಡುವೆ ಬಜೆಟ್ ತಯಾರಿ ನಡೆದಿತ್ತು. ಇಡೀ ಜಗತ್ತಿನಲ್ಲಿಯೇ ಭಾರತದಲ್ಲಿಂದು ಅತೀ ಕಡಿಮೆ ಪ್ರಮಾಣದ ಕೋವಿಡ್ ಪ್ರಮಾಣ ದಾಖಲಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ 27. 1ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಲಾಗಿದೆ. ಭಾರತದಲ್ಲಿ ಈಗಾಗಲೇ 2 ಲಸಿಕೆ ಅಭಿವೃದ್ದಿಪಡಿಸಿದೆ. ಇದಕ್ಕಾಗಿ ವಿಜ್ಞಾನಿಗಳಿಗೆ ಧನ್ಯವಾದ ಅರ್ಪಿಸುವುದಾಗಿ ಸೀತಾರಾಮನ್ ತಿಳಿಸಿದರು.
ಕೋವಿಡ್ ನಂತರ ದೇಶ ಎರಡು ಮಹಾಯುದ್ಧಗಳ ಸ್ಥಿತಿ ಎದುರಿಸುತ್ತಿದೆ.ಕೋವಿಡ್ ಲಸಿಕೆ ನೀಡಿಕೆಯಿಂದ ಆರ್ಥಿಕ ಚೇತರಿಕೆಯಾಗಿದೆ. ಶೀಘ್ರದಲ್ಲಿಯೇ ದೇಶದಲ್ಲಿ ಇನ್ನೂ ಎರಡು ಕೋವಿಡ್ ಲಸಿಕೆ ಲಭ್ಯವಾಗಲಿದೆ. ಆರ್ಥಿಕ ಚೇತರಿಕೆಗೆ ಕೇಂದ್ರ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಆರ್ಥಿಕ ಚೇತರಿಕೆಗೆ ನಮ್ಮ ಸರ್ಕಾರ ಮಂಡಿಸುವ ಬಜೆಟ್ ನೆರವಾಗಲಿದೆ. ಐದು ಆಧಾರಸ್ತಂಭಗಳ ಮೇಲೆ ಬಜೆಟ್ ಮಂಡಿಸಲಾಗುತ್ತಿದೆ ಎಂದಿದ್ದಾರೆ.