ನವದೆಹಲಿ: ಲಡಾಖ್ ಅನ್ನು ಕೇಂದ್ರಾಡಳಿತ ಘೋಷಣೆ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ಇದೇ ಲಡಾಖ್ ನ ಲೇಹ್ ನಲ್ಲಿ ಕೇಂದ್ರ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದೆ.
ಸಂಸತ್ ನಲ್ಲಿ ಇಂದು ಕೇಂದ್ರ ಆಯವ್ಯಯ 2021ನ್ನು ಮಂಡಿಸಿದ ನಿರ್ಮಲಾ ಸೀತಾರಾಮನ್ ಅವರು, ಲಡಾಖ್ ನಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಘೋಷಣೆ ಮಾಡಿದರು. ಅದರಂತೆ ಲಡಾಖ್ ನಲ್ಲಿ ಉನ್ನತ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆ ಇದೆ. ಪ್ರಮುಖವಾಗಿ ಲೇಹ್ ನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದರು. ಇದು ದೇಶದ 55ನೇ ಕೇಂದ್ರೀಯ ವಿಶ್ವವಿದ್ಯಾಲಯವಾಗಲಿದೆ.
ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ನಲ್ಲಿ ಉನ್ನತ ಶಿಕ್ಷಣ ಎಲ್ಲ ವಿದ್ಯಾರ್ಥಿಗಳಿಗೂ ಲಭ್ಯವಾಗಬೇಕು. ಹೀಗಾಗಿ ಲೇಹ್ ನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ನಾನು ಪ್ರಸ್ತಾಪಿಸುತ್ತೇನೆ. ಅಂತೆಯೇ ಎನ್‌ಜಿಒಗಳು, ಖಾಸಗಿ ಶಾಲೆಗಳು ಮತ್ತು ರಾಜ್ಯಗಳ ಸಹಭಾಗಿತ್ವದಲ್ಲಿ 100 ಹೊಸ ಸೈನಿಕ್ ಶಾಲೆಗಳನ್ನು ಸ್ಥಾಪಿಸಲಾಗುವುದು. ಭಾರತದ ಉನ್ನತ ಶಿಕ್ಷಣ ಆಯೋಗದ ಸ್ಥಾಪನೆಯನ್ನು ಜಾರಿಗೆ ತರಲು ನಾವು ಈ ವರ್ಷ ಶಾಸನವನ್ನು ಪರಿಚಯಿಸಲಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಉನ್ನತ ಶಿಕ್ಷಣಕ್ಕಾಗಿ ಪ್ರಧಾನಿ ಸಮಿತಿ ರಚನೆಗಳನ್ನು ರಚಿಸಬೇಕಾಗಿದೆ. ಎನ್‌ಇಪಿ 2020 ರ ಅಡಿಯಲ್ಲಿ 15,000 ಕ್ಕೂ ಹೆಚ್ಚು ಶಾಲೆಗಳನ್ನು ಬಲಪಡಿಸಲಾಗುವುದು ಎಂದು ಹೇಳಿದರು.
ಲಡಾಖ್ ವಿದ್ಯಾರ್ಥಿಗಳ ಕನಸು-ನನಸು
ಲಡಾಖ್ ನಲ್ಲಿ ಪೂರ್ಣಪ್ರಮಾಣದ ವಿಶ್ವ ವಿದ್ಯಾಲಯ ಸ್ಥಾಪಿಸುವಂತೆ ದಶಕಗಳಿಂದಲೂ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಬೇಡಿಕೆ ಇಟ್ಟಿದ್ದವು. ಅಲ್ಲದೆ ಈ ಸಂಬಂಧ ಸಾಕಷ್ಟು ಪ್ರತಿಭಟನೆಗಳು ಕೂಡ ನಡೆದಿದ್ದವು. ಇದೀಗ ಲಡಾಖ್ ವಿದ್ಯಾರ್ಥಿಗಳ ಕನಸು ನನಸಾಗಿದೆ.