ನವದೆಹಲಿ: ಯುಪಿಎಸ್ ಸಿ ನಾಗರಿಕ ಸೇವಾ ಆಕಾಂಕ್ಷಿಗಳಿಗೆ ವಯಸ್ಸಿನ ಮಿತಿಯಲ್ಲಿ ಒಂದು ಬಾರಿ ವಿಶ್ರಾಂತಿ ನೀಡಲಾಗದು ಮತ್ತು ಕೋವಿಡ್-19 ಪೀಡಿತ ನಾಗರಿಕ ಸೇವಾ ಅಭ್ಯರ್ಥಿಗಳಿಗೆ ಯಾವುದೇ ಹೆಚ್ಚುವರಿ ಅವಕಾಶ ನೀಡಲಾಗದು ಎಂದು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಯುಪಿಎಸ್ ಸಿ ಪರೀಕ್ಷೆಗೆ ಅವಕಾಶ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠಕ್ಕೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ ರಾಜು ಅವರು ಮಾಹಿತಿ ನೀಡಿದರು.
ಇದು ಕೊನೆಯ ನಿಮಿಷಗಳಲ್ಲಿ ಸಿದ್ಧಪಡಿಸುವ ಪರೀಕ್ಷೆಯಲ್ಲ. ಜನರು ಒಟ್ಟಿಗೆ ವರ್ಷಗಳ ಕಾಲ ತಯಾರಿ ನಡೆಸುತ್ತಾರೆ. ಅದರಲ್ಲಿ ಬದಲಾವಣೆ ಮಾಡಲಾಗದು ಎಂದು ಸರ್ಕಾರ ಸ್ಪಷ್ಟಪಡಿಸಿತು.
2020ರ ಅಕ್ಟೋಬರ್ ನಲ್ಲಿ ನಡೆದ ಪ್ರಾಥಮಿಕ ಪರೀಕ್ಷೆಯಲ್ಲಿ ಕೊನೆಯ ಪ್ರಯತ್ನ ಮಾಡಿದ ಅಭ್ಯರ್ಥಿಗಳಿಗೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಹೆಚ್ಚುವರಿ ಪ್ರಯತ್ನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿತು.
ಕೋವಿಡ್-19 ಕಾರಣದಿಂದಾಗಿ ನಾಗರಿಕ ಸೇವೆಗಳ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅವಕಾಶವನ್ನು ಕೋರಿ ಅರ್ಜಿ ಸಲ್ಲಿಕೆಯಾಗಿತ್ತು.