ಕಾಸರಗೋಡು: ಸರಕಾರಿ ಜಾಗದಲ್ಲಿ ಕೃಷಿ ನಡೆಸಿ, ಮನೆ ನಿರ್ಮಿಸಿರುವ, ಇತರೆಡೆ ಜಾಗ ಹೊಂದದೇ ಇರುವ ಕುಟುಂಬಗಳಿಗೆ ಭೂಹಕ್ಕು ಪತ್ರ ನೀಡಿಕೆ ಸಂಬಂಧ ಆರಂಭಿಸಲಾದ "ತಂಗಿರುವ ಜಾಗಕ್ಕೆ ಭೂಹಕ್ಕು" ಯೋಜನೆ ಪ್ರಕಾರ ಕಾಸರಗೋಡು ಜಿಲ್ಲೆಯಲ್ಲಿ 2112 ಅರ್ಜಿಗಳು ಲಭಿಸಿದ್ದು, ಸಮಗ್ರ ಪರಿಶೀಲನೆಯ ನಂತರ ಅಂತಿಮ ಪಟ್ಟಿಯಲ್ಲಿ 216 ಅರ್ಜಿಗಳು ಸೇರಿವೆ. ಯೋಜನೆಯ ಮುಂದಿನ ಕ್ರಮಗಳು ಮುಂದುವರಿಯುತ್ತಿವೆ. ಅಂತಿಮ ಪಟ್ಟಿಯಲ್ಲಿ ಸೇರಿರುವ ಮಂದಿಯಲ್ಲಿ ಅರ್ಹರಾಗಿರುವವರಿಗೆ ಕಾನೂನು ಪ್ರಕಾರದ ಜಾಗ ವಿಂಗಡಿಸಿ ನೀಡಲಾಗುವುದು. ರಾಜ್ಯ ಮಟ್ಟದಲ್ಲಿ ಪ್ರಥಮ ಬಾರಿಗೆ 2020 ಅಕ್ಟೋಬರ್ ತಿಂಗಳಲ್ಲಿ ಕಾಸರಗೋಡಿನಲ್ಲಿ ಯೋಜನೆಗೆ ಚಾಲನೆ ಲಭಿಸಿತ್ತು. ಅಕ್ಷಯ ಕೇಂದ್ರಗಳಲ್ಲಿ ಲಭಿಸಿದ್ದ ಅರ್ಜಿಗಳನ್ನು ತಾಲೂಕು ಮಟ್ಟದಲ್ಲಿ ಪರಿಶೀಲಿಸಲಾಗಿತ್ತು.
ಜಿಲ್ಲೆಯಲ್ಲಿ ಮಂಜೂರುಗೊಂಡದ್ದು 8765 ಭೂಹಕ್ಕು ಪತ್ರಗಳು :
ಅನೇಕ ವರ್ಷಗಳಿಂದ ಕಾದುಕುಳಿತಿದ್ದ 8765 ಮಂದಿಗೆ ಕಳೆದ 5 ವರ್ಷದ ಅವಧಿಯಲ್ಲಿ ಭೂಹಕ್ಕು ಪತ್ರ ವಿತರಿಸಲಾಗಿದೆ. ಭೂಹಕ್ಕು ಸಂಹಿತೆ ಪ್ರಕಾರ 3909 ಭೂಃಕ್ಕು ಪತ್ರಗಳು, 331 ಮಿಗತೆ ಭೂಹಕ್ಕು ಪತ್ರಗಳು, 327 ಮುಜರಾಯಿ ಭೂಹಕ್ಕು ಪತ್ರಗಳು, 3566 ಲ್ಯಾಮಡ್ ಟ್ರಿಬ್ಯೂನಲ್ ಭೂಃಕ್ಕು ಪತ್ರಗಳು, ಜಾಗ ರಹಿತ ಕೇರಳಂ ಯೋಜನೆಯಲ್ಲಿ 632 ಭೂಹಕ್ಕು ಪತ್ರ ಈ ವರೆಗೆ ಮಂಜೂರು ಮಾಡಲಾಗಿದೆ.
ಭೂಹಕ್ಕು ಸಂಹಿತೆ ಪ್ರಕಾರ ಮಂಜೂರು ಮಾಡಿರುವ ಭೂಹಕ್ಕು ಪತ್ರಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ (1121) ಭೂಹಕ್ಕು ಪತ್ರಗಳು ಮಂಜೇಶ್ವರ ತಾಲೂಕಿನಲ್ಲಿ ವಿತರಣೆಗೊಂಡಿದೆ. ಕಾಸರಗೋಡು ತಾಲೂಕಿನಲ್ಲಿ 932, ವೆಳ್ಳಿರಿಕುಂಡ್ ತಾಲೂಕಿನಲ್ಲಿ 924, ಹೊಸದುರ್ಗದಲ್ಲಿ 932 ಭೂಹಕ್ಕು ವಿತರಣೆ ನಡೆದಿವೆ.