ಶ್ರೀನಗರ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಅಲ್ಲಿನ ಪರಿಸ್ಥಿತಿಯ ಬಗ್ಗೆ ಅಂದಾಜಿಸಲು ಫ್ರಾನ್ಸ್, ಯುರೋಪ್ ಒಕ್ಕೂಟ ಹಾಗೂ ಮಲೇಶ್ಯ ಸೇರಿದಂತೆ ಭಾರತದಲ್ಲಿನ 24 ರಾಯಭಾರಿಗಳ ನಿಯೋಗವು ಎರಡು ದಿನಗಳ ಭೇಟಿಗಾಗಿ ಜಮ್ಮುಕಾಶ್ಮೀರಕ್ಕೆ ಬುಧವಾರ ಆಗಮಿಸಿದೆ.
ಯುರೋಪ್, ಆಫ್ರಿಕ, ದಕ್ಷಿಣ ಅಮೆರಿಕ ಹಾಗೂ ಏಶ್ಯ ಖಂಡಗಳ ವಿವಿಧ ದೇಶಗಳ ರಾಯಭಾರಿಗಳಿರುವ ಈ ನಿಯೋಗವನ್ನು ಕೇಂದ್ರ ಕಾಶ್ಮೀರದ ಬಡ್‌ಗಾಮ್‌ನಲ್ಲಿರುವ ಸರಕಾರಿ ಕಾಲೇಜ್‌ಗೆ ಕರೆದೊಯ್ಯಲಾಯಿತು. ಪಂಚಾಯತ್ ಸೇರಿದಂತೆ ಸ್ಥಳೀಯಾಡಳಿತ ಸಂಸ್ಥೆಗಳನ್ನು ಬಲಪಡಿಸಲು ಸರಕಾರ ವಿವಿಧ ಕ್ರಮಗಳನ್ನು ಕೈಗೊಂಡಿರುವುದಾಗಿ ನಿಯೋಗಕ್ಕೆ ಸರಕಾರದ ಅಧಿಕಾರಿಗಳು ವಿವರಣೆ ನೀಡಿದರು. ನಿಯೋಗದ ಭೇಟಿಯ ಹಿನ್ನೆಲೆಯಲ್ಲಿ ಬಡ್‌ಗಾಮ್‌ನಲ್ಲಿ ಭದ್ರತಾ ಏರ್ಪಾಡುಗಳನ್ನು ಬಿಗಿಗೊಳಿಸಲಾಗಿತ್ತು. ನಿಯೋಗದ ಸದಸ್ಯರು ಸ್ಥಳೀಯಾಡಳಿತ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸರಪಂಚರ ಜೊತೆ ಮುಕ್ತ ಸಮಾಲೋಚನೆ ನಡೆಸಿದರು ಹಾಗೂ ವಿಚಾರ ವಿನಿಮಯ ಮಾಡಿಕೊಂಡರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿನ ತಮ್ಮ ವಾಸ್ತವ್ಯದ ಅವಧಿಯಲ್ಲಿ ನಿಯೋಗದ ಸದಸ್ಯರು ಜಿಲ್ಲಾ ಅಭಿವೃದ್ಧಿ ಮಂಡಳಿಯ ಸದಸ್ಯರು ಹಾಗೂ ನಾಗರಿಕ ಸಮುದಾಯದ ಪ್ರತಿನಿಧಿಗಳನ್ನು ಕೂಡಾ ಭೇಟಿಯಾಗಲಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.ದಾಲ್‌ಸರೋವರದ ದಂಡೆಯಲ್ಲಿರುವ ಪ್ರಸಿದ್ಧ ಹಝರತ್‌ಬಾಲ್ ಮಸೀದಿಯನ್ನು ಕೂಡಾ ಅವರು ಸಂದರ್ಶಿಸಲಿದ್ದಾರೆ.
ಫ್ರಾನ್ಸ್,ಮಲೇಶ್ಯ, ಬ್ರೆಝಿಲ್, ಇಟಲಿ, ಫಿನ್‌ಲ್ಯಾಂಡ್, ಬಾಂಗ್ಲಾ, ಕ್ಯೂಬಾ, ಚಿಲಿ, ಪೋರ್ಚುಗಲ್, ನೆದರ್‌ಲ್ಯಾಂಡ್ಸ್, ಬೆಲ್ಜಿಯಂ, ಸ್ಪೇನ್, ಸ್ವೀಡನ್, ಸೆನೆಗಲ್, ತಾಜಿಕಿಸ್ತಾನ, ಕಿರ್ಗಿಝ್‌ಸ್ತಾನ, ಐಯರ್‌ಲ್ಯಾಂಡ್,ಘಾನಾ,ಎಸ್ಟೋನಿಯಾ, ಬೊಲಿವಿಯಾ, ಮಲಾವಿ, ಎರಿಟ್ರಿಯಾ ಐವರಿಕೋಸ್ಟ್ ಮತ್ತು ಯುರೋಪ್ ಒಕ್ಕೂಟದ ರಾಯಭಾರಿಗಳು ನಿಯೋಗದಲ್ಲಿದ್ದರು.