ಅಮರಾವತಿ: ಭಾರತ ಈ ವರೆಗೆ 15 ರಾಷ್ಟ್ರಗಳಿಗೆ ಕೊವಿಡ್-19 ಲಸಿಕೆಯನ್ನು ಪೂರೈಕೆ ಮಾಡಿದೆ. ಇನ್ನೂ 25 ದೇಶಗಳಿಗೆ ಲಸಿಕೆ ಪೂರೈಕೆಗೆ ಸಿದ್ಧತೆ ನಡೆದಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಶನಿವಾರ ಹೇಳಿದರು.
'25 ರಾಷ್ಟ್ರಗಳಿಗೆ ಲಸಿಕೆ ಪೂರೈಸುವ ಪ್ರಕ್ರಿಯೆ ವಿವಿಧ ಹಂತದಲ್ಲಿದೆ. ಬೇಡಿಕೆ ಸಲ್ಲಿಸಿದ ರಾಷ್ಟ್ರಗಳಿಗೆ ಲಸಿಕೆ ಪೂರೈಕೆ ಆರಂಭಿಸಿರುವ ಕಾರಣ, ಜಾಗತಿಕವಾಗಿ ಭಾರತದ ಗೌರವ ಮತ್ತಷ್ಟೂ ವೃದ್ಧಿಸಿದೆ' ಎಂದು ಅವರು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಲಸಿಕೆಗೆ ಬೇಡಿಕೆ ಸಲ್ಲಿಸಿರುವ ರಾಷ್ಟ್ರಗಳನ್ನು ಮೂರು ವರ್ಗಗಳನ್ನಾಗಿ ವಿಂಗಡಿಸಲಾಗಿದೆ. ಬಡ ಹಾಗೂ ಲಸಿಕೆ ಬೆಲೆ ಬಗ್ಗೆ ಎಚ್ಚರಿಕೆ ಹೆಜ್ಜೆ ಇಡುವ ರಾಷ್ಟ್ರಗಳು ಮತ್ತು ಔಷಧಿ ತಯಾರಿಸುವ ಕಂಪನಿಗಳೊಂದಿಗೆ ನೇರವಾಗಿ ವ್ಯವಹರಿಸುವ ರಾಷ್ಟ್ರಗಳು ಎಂಬುದಾಗಿ ವಿಂಗಡಿಸಲಾಗಿದೆ' ಎಂದರು.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪನಿ ಕೋವ್ಯಾಕ್ಸಿನ್, ಆಕ್ಸ್‌ಫರ್ಡ್‌ನ ಕೋವಿಶೀಲ್ಡ್ ಲಸಿಕೆಯನ್ನು ಪುಣೆ ಮೂಲದ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿವೆ.