ನವದೆಹಲಿ: ಗಣರಾಜ್ಯೋತ್ಸವ ದಿನವಾದ ಜ. 26ರ ಬಳಿಕ ರಾಜಧಾನಿಯಲ್ಲಿ ನೂರಕ್ಕೂ ಅಧಿಕ ಮಂದಿ ನಾಪತ್ತೆ ಆಗಿರುವುದು ಬೆಳಕಿಗೆ ಬಂದಿದೆ. ಹೀಗೆ ದೊಡ್ಡ ಪ್ರಮಾಣದಲ್ಲಿ ನಾಪತ್ತೆ ಆಗಿರುವ ಸಂಬಂಧ ಈಗ ಸಮತಿಯೊಂದನ್ನು ಕೂಡ ರಚಿಸಲಾಗಿದೆ.
ಜ. 26ರಂದು ನಡೆದ ಟ್ರ್ಯಾಕ್ಟರ್ ರ‍್ಯಾಲಿ ಬಳಿಕ ನೂರಕ್ಕೂ ಅಧಿಕ ರೈತರು ನಾಪತ್ತೆ ಆಗಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ. ಈ ಸಂಬಂಧ ತೀವ್ರ ಬೇಸರ ವ್ಯಕ್ತಪಡಿಸಿರುವ ಸಂಘಟನೆ, ನಾಪತ್ತೆ ಆಗಿರುವವರ ಕುರಿತು ಶೀಘ್ರದಲ್ಲೇ ಮಾಹಿತಿ ಕಲೆ ಹಾಕಿ ಸಂಬಂಧಿತ ಪ್ರಾಧಿಕಾರಗಳಿಗೆ ಸೂಕ್ತ ಕ್ರಮಕ್ಕಾಗಿ ನೀಡಲಾಗುವುದು. ಅಲ್ಲದೆ ನಾಪತ್ತೆ ಪ್ರಕರಣ ಸಂಬಂಧ 40ಕ್ಕೂ ಅಧಿಕ ರೈತ ಸಂಘಟನೆಗಳ ಒಕ್ಕೂಟದ ಪ್ರಮುಖ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ ಎಂದೂ ತಿಳಿಸಿದೆ.
ಪ್ರಕರಣ ಸಂಬಂಧ ಫೋನ್ ನಂಬರ್ವೊಂದನ್ನು ಕೂಡ ಬಹಿರಂಗ ಪಡಿಸಿರುವ ಮೋರ್ಚಾ, ನಾಪತ್ತೆ ಆದವರ ಕುರಿತ ಹೆಸರು ಇತ್ಯಾದಿ ವಿವರ ನೀಡುವಂತೆಯೂ ಕೋರಿದೆ. ಮತ್ತೊಂದೆಡೆ ಸರ್ಕಾರ ಪ್ರತಿಭಟನಾ ಸ್ಥಳಗಳನ್ನು ವಶ ಪಡಿಸಿಕೊಳ್ಳುತ್ತಿದೆ ಹಾಗೂ ಮಾಧ್ಯಮ ಹಾಗೂ ಜನಸಾಮಾನ್ಯರು ಪ್ರತಿಭಟನಾಕಾರರನ್ನು ಸಂಪರ್ಕಿಸದಂತೆ ತಡೆಯಲಾಗುತ್ತಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಆರೋಪಿಸಿದೆ.