ನವದೆಹಲಿ: ಭಾರತೀಯ ಮೂಲದ ಬ್ರಿಟನ್ ಸಚಿವ ಹಾಗೂ ವಿಶ್ವಸಂಸ್ಥೆಯ 26ನೇ ಹವಾಮಾನ ಬದಲಾವಣೆ ಸಮ್ಮೇಳನದ(ಸಿಒಪಿ26) ಅಧ್ಯಕ್ಷ ಅಲೋಕ್ ಶರ್ಮಾ ಅವರು ಮಂಗಳವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ಹವಾಮಾನ ಬದಲಾವಣೆಯ ಕಾರ್ಯಸೂಚಿ ಮತ್ತು ಮುಂಬರುವ ಸಿಒಪಿ 26 ಕುರಿತು ಭಾರತ-ಬ್ರಿಟನ್ ಸಹಕಾರ ಕುರಿತು ಚರ್ಚೆ ನಡೆಸಿದರು.
ಅಲೋಕ್ ಶರ್ಮಾ ಅವರು ಮಂಗಳವಾರ ಪ್ರಧಾನಿ ಮೋದಿ ಅವರನ್ನು ಭೇಟಿಯಾದರು. ಹವಾಮಾನ ಬದಲಾವಣೆಯ ಕಾರ್ಯಸೂಚಿ ಮತ್ತು ಸಿಒಪಿ26 ಕುರಿತು ಭಾರತ-ಬ್ರಿಟಮ್ ಸಹಕಾರದ ಬಗ್ಗೆ ಚರ್ಚೆಗಳು ನಡೆದವು. ಹವಾಮಾನ ಶೃಂಗಸಭೆಯ ಯಶಸ್ವಿ ಸಂಘಟನೆಗಾಗಿ ಪ್ರಧಾನಿ ಮೋದಿ ಅವರು ಬ್ರಿಟನ್ ಗೆ ಶುಭಾಶಯ ತಿಳಿಸಿದರು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್ ಜಾವಡೇಕರ್ ಅವರು ಅಲೋಕ್ ಶರ್ಮಾ ಅವರನ್ನು ಭೇಟಿ ಮಾಡಿ, ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದ್ದರು.