ಡೆಹ್ರಾಡೂನ್: ಉತ್ತರಾಖಂಡದಲ್ಲಿ ಸಂಭವಿಸಿದ ನೀರ್ಗಲ್ಲು ಸ್ಫೋಟದಿಂದಾಗಿ ಉಂಟಾದ ಪ್ರವಾಹ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಅಂತೆಯೇ ಇನ್ನೂ 200 ಮಂದಿ ನಾಪತ್ತೆಯಾಗಿದ್ದು, ತಪೋವನ ಸುರಂಗ ಮಾರ್ಗದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಉತ್ತರಾ ಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಕುಸಿದು ಸಂಭವಿಸಿದು ಸಂಭವಿಸಿದ ಪ್ರವಾಹದ ನಂತರ ನಡೆಯುತ್ತಿರುವ ಶೋಧ ಕಾರ್ಯದಲ್ಲಿ ಮಂಗಳವಾರದ ವೇಳೆಗೆ 28 ಮಂದಿಯ ಶವಗಳನ್ನು ಹೊರತೆಗೆಯಲಾಗಿದೆ. ಅಂತೆಯೇ ಇನ್ನೂ 200 ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಅಧಿಕಾರಿಗಳು ಹೇಳಿದ್ದಾರೆ.
ಕಾಣೆಯಾದವರಲ್ಲಿ ಜಲವಿದ್ಯುತ್ ಯೋಜನಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಹಾಗೂ ಹತ್ತಿರದ ಗ್ರಾಮಸ್ಥರು ಇದ್ದಾರೆ ಎನ್ನಲಾಗಿದೆ. ಘಟಕದಲ್ಲಿ ಸಿಲುಕಿದ್ದ ಕನಿಷ್ಛ 30 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದೆ. ಪ್ರವಾಹದ ವೇಳೆ ಗ್ರಾಮಸ್ಥರ ಮನೆಗಳು ಮತ್ತು ಕಾರ್ಮಿಕರ ತಾತ್ಕಾಲಿಕ ಶೆಡ್ ಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಎನ್‌ಟಿಪಿಸಿಯ 480 ಮೆಗಾವಾಟ್ ಸಾಮರ್ಥ್ಯದ ತಪೋವನ-ವಿಷ್ಣುಗಡ ಯೋಜನೆ ಮತ್ತು 13.2 ಮೆಗಾವಾಟ್ ಸಾಮರ್ಥ್ಯದ ರಿಷಿ ಗಂಗಾ ಜಲವಿದ್ಯುತ್ ಯೋಜನೆಗಳ ಸುರಂಗಗಳಲ್ಲಿ ನೀರು ನುಗ್ಗಿದ್ದು, ಅಪಾರ ಹಾನಿ ಸಂಭವಿಸಿದೆ. ನೀರಿನೊಂದಿಗೆ ಕೆಸರು ತುಂಬಿರುವುದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
ಕಾರ್ಮಿಕರು 12 ಅಡಿ ಎತ್ತರ ಮತ್ತು ಸುಮಾರು 2.5 ಕಿ.ಮೀ ಉದ್ದದ 'ಹೆಡ್ ರೇಸ್ ಟನಲ್' (ಎಚ್‌ಆರ್‌ಟಿ) ಯಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ಅಹೋರಾತ್ರಿ ಕಾರ್ಯಾಚರಣೆ ಸಾಗಿದೆ. ಎನ್ ಡಿಆರ್ ಎಫ್ ಮತ್ತು ಎಸ್ ಟಿ ಆರ್ ಎಫ್ ತಂಡಗಳ ನೂರಾರು ಸಿಬ್ಬಂದಿಗಳು ರಾತ್ರಿಯಿಡೀ ಅವಶೇಷಗಳು ಮತ್ತು ಕೆಸರನ್ನು ತೆರವುಗೊಳಿಸುತ್ತಿದ್ದಾರೆ ಎಂದು ಐಟಿಬಿಪಿ ವಕ್ತಾರ ವಿವೇಕ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ಖಾಸಗಿ ಮತ್ತು ಐಎಎಫ್ ಹೆಲಿಕಾಪ್ಟರ್‌ಗಳು 13 ಗ್ರಾಮಗಳ ಪೀಡಿತ ಪ್ರದೇಶಗಳಲ್ಲಿ ಸುಮಾರು 100 ಪಡಿತರ ಕಿಟ್‌ಗಳನ್ನು ವಿತರಿಸಿದ್ದು, ಇಲ್ಲಿ ಒಟ್ಟು 2,500 ಜನರು ವಾಸಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ, ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಬಳಿಕ ಜೋಶಿಮಠದ ಐಟಿಬಿಪಿ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಸಂಜೆ ತಪೋವನದ ಸುರಂಗದಿಂದ ರಕ್ಷಿಸಲ್ಪಟ್ಟ 12 ಕಾರ್ಮಿಕರನ್ನು ಭೇಟಿಯಾಗಲಿದ್ದಾರೆ.
ವೈಮಾನಿಕ ಸಮೀಕ್ಷೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, 'ಸುರಂಗದೊಳಗೆ ಸಿಕ್ಕಿಬಿದ್ದವರನ್ನು ತಲುಪಲು ಮತ್ತು ಸಾಧ್ಯವಾದಷ್ಟು ಜೀವಗಳನ್ನು ಉಳಿಸಲು ಆದ್ಯತೆ ನೀಡಲಾಗಿದೆ. ಸುರಂಗದೊಳಗೆ ಟನ್ಗಳಷ್ಟು ಕೆಸರಿನ ಅವಶೇಷಗಳನ್ನು ತೆರವುಗೊಳಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಹೆಚ್ಚುವರಿ ಭಾರೀ ಯಂತ್ರಗಳನ್ನು ತರಿಸಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್, ಎನ್‌ಡಿಆರ್‌ಎಫ್, ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ ಮತ್ತು ಸೇನೆಯ ಸಿಬ್ಬಂದಿಗಳು ತೊಡಗಿದ್ದಾರೆ.