ಬದಿಯಡ್ಕ: ಕಾಸರಗೋಡು ಜೋಗಿ ಸಮಾಜ ಸುಧಾರಕ ಸಂಘದ ವಾರ್ಷಿಕ ಮಹಾಸಭೆಯು ಫೆಬ್ರವರಿ 28ರಂದು ಭಾನುವಾರ ಬೆಳಗ್ಗೆ 9.00ಕ್ಕೆ ಬದಿಯಡ್ಕ ಗಣೇಶ ಮಂದಿರದಲ್ಲಿ ಜರಗಲಿರುವುದು. ಈ ಸಂದರ್ಭದಲ್ಲಿ ಶ್ರೀ ಕಾಲಭೈರವೇಶ್ವರ ಪೂಜೆ(ರೋಟ್ ಪೂಜೆ), ಸನ್ಮಾನ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರವು ನಡೆಯಲಿರುವುದು.
ಸಭಾ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಮುರಹರಿ ವಿ.ಜಿ. ಅಧ್ಯಕ್ಷತೆ ವಹಿಸಲಿರುವರು. ಗೌರವಾಧ್ಯಕ್ಷ ಜನಾರ್ದನ ಮಾಸ್ತರ್ ಮುಂಡಿತ್ತಡ್ಕ ಉದ್ಘಾಟಿಸಿ ಮಾತನಾಡುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘ ಮಂಗಳೂರು ಇದರ ಅಧ್ಯಕ್ಷ ಕಿರಣ್ ಜೋಗಿ, ಪುತ್ತೂರು ನಾಥ ಪಂಥೀಯ ಜೋಗಿ ಸಮಾಜ ಸಂಘದ ಅಧ್ಯಕ್ಷ ಮೋನಪ್ಪ ಪುರುಷ ಪುತ್ತೂರು, ವಿಟ್ಲ ಜೋಗಿ ಸಮಾಜ ಸಂಘ ಅಧ್ಯಕ್ಷ ನವನಾಥ್ ವಿಟ್ಲ, ಜೋಡುಕಲ್ಲು ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಜಯಂತ್ ಜೋಗಿ ಭಾಗವಹಿಸಲಿರುವರು. ಈ ಸಂದರ್ಭದಲ್ಲಿ ಮಂಗಳೂರು ಕದ್ರಿ ಮಠದ ಪ್ರಧಾನ ಅರ್ಚಕ ಉಮೇಶ್ ನಾಥ್ ಕದ್ರಿ ಅವರಿಗೆ ಸನ್ಮಾನ ಸಮಾರಂಭ ನಡೆಯಲಿರುವುದು. ಸಹಕಾರಿ ಇಲಾಖೆಯ ನಿವೃತ್ತ ಅಸಿಸ್ಟೆಂಟ್ ರಿಜಿಸ್ಟ್ರಾರ್ ಐತ್ತಪ್ಪ ಮವ್ವಾರು, ನಿವೃತ್ತ ಮುಖ್ಯೋಪಾಧ್ಯಾಯ ಭಾಸ್ಕರ ಬಿ ಎಸ್, ನಿವೃತ್ತ ಗ್ರಾಮಾಧಿಕಾರಿ ಕೆ. ಗೋಪಾಲ ಮಂಜೇಶ್ವರ ಉಪಸ್ಥಿತರಿರುವರು. 2019-20ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ, ಪ್ಲಸ್‍ಟು ಪರೀಕ್ಷೆಯಲ್ಲಿ 90 ಶೇ ಕ್ಕಿಂತ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರವನ್ನು ನೀಡಲಾಗುವುದು. ಭರತನಾಟ್ಯ, ಸಂಗೀತ, ವಾದ್ಯಸಂಗೀತ, ಯೋಗ, ಚಿತ್ರಕಲೆಯಲ್ಲಿ ವಿದ್ವತ್/ಡಿಪ್ಲೋಮಾದಲ್ಲಿ ಉತ್ತೀರ್ಣರಾದ ಕಲಾವಿದರನ್ನು ಗೌರವಿಸಲಾಗುವುದು. ಮುಂದಿನ ನೂತನ ಕಾರ್ಯಕಾರೀ ಸಮಿತಿಯ ರೂಪೀಕರಣವನ್ನು ಕರ್ನಾಟಕ ನಾಥಪಂಥೀಯ ಜೋಗಿ ಸಮಾಜ ಸುಧಾರಕ ಸಂಘದ ಪದಾಧಿಕಾರಿಯವರ ಉಪಸ್ಥಿತಿಯಲ್ಲಿ ನಡೆಸಲಾಗುವುದು. ಸಮಾಜ ಬಾಂಧವರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಸಂಘಟನೆಯನ್ನು ಬಲಪಡಿಸಬೇಕೆಂದು ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಬದಿಯಡ್ಕ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.