ತಿರುವನಂತಪುರ: ಕಲಬೆರಕೆಯುಕ್ತ ಪಶು ಆಹಾರ ವಿತರಣೆಗೆ ಮೂಗುದಾರ ತರಲು ಸರ್ಕಾರ ಯೋಜನೆ ರೂಪಿಸಿದ್ದು, ಕಲಬೆರಕೆ ಮಾಡುವವರ ವಿರುದ್ಧ ಕಾನೂನು ತರಲು ಕೇರಳ ಸರ್ಕಾರ ಸಿದ್ಧತೆ ನಡೆಸಿದೆ. ಬುಧವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಕರಡು ಸುಗ್ರೀವಾಜ್ಞೆಗೆ ಅನುಮೋದನೆ ನೀಡಲಾಯಿತು. ಕೇರಳದಲ್ಲಿ ಜಾನುವಾರು, ಕೋಳಿ ಆಹಾರ ಮತ್ತು ಉತ್ಪಾದನೆ ಹಾಗೂ ಮಾರಾಟದಲ್ಲಿ ಖನಿಜ ಮಿಶ್ರಣ ನಿಯಂತ್ರಣ ಎಂಬ ಶೀರ್ಷಿಕೆಯಡಿಯಲ್ಲಿ ಈ ಸುಗ್ರೀವಾಜ್ಞೆಯನ್ನು ಹೊರಡಿಸಲಾಗಿದೆ.
ಹಸುಗಳ ಮೇವು ಮತ್ತು ಕೋಳಿ ಫೀಡ್ ಗಳನ್ನು ಕಲಬೆರಕೆ ಮಾಡಿದಲ್ಲಿ 50,000 ರೂ.ಗಳಿಂದ 2 ಲಕ್ಷ ರೂ.ಗಳ ವರೆಗೆ ದಂಡ ವಿಧಿಸಲಾಗುತ್ತದೆ. ಇದಲ್ಲದೆ, ಮೇವು ಮಾರಾಟಗಾರರ ಪರವಾನಗಿಯನ್ನು ರದ್ದುಗೊಳಿಸಲಾಗುತ್ತದೆ. ಸುಗ್ರೀವಾಜ್ಞೆಯ ಮೂಲಕ ಉತ್ಪನ್ನಗಳ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಉದ್ದೇಶಿಸಿದೆ.
ಪಶುಗಳ ಮೇವು, ಕೋಳಿ ಆಹಾರ ಮತ್ತು ಖನಿಜ ಲವಣಗಳ ಉತ್ಪಾದನೆ ಮತ್ತು ವಿತರಣೆಯನ್ನು ನಿಯಂತ್ರಿಸಲು ಸರ್ಕಾರ ನಿರ್ಧರಿಸಿದೆ. ಅಂತಹ ಆಹಾರ ಪದಾರ್ಥಗಳ ಪ್ಯಾಕೆಟ್‍ನ ಹೊರಭಾಗದಲ್ಲಿ ಯಾವ ಪದಾರ್ಥಗಳು ಮತ್ತು ಎಷ್ಟು ಬಳಸಲ್ಪಟ್ಟವು ಎಂಬುದನ್ನು ದಾಖಲಿಸಲು ಕಠಿಣ ಕಾನೂನುತರಲಾಗುತ್ತಿದೆ.