ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಪುಲ್ವಾಮಾ ಉಗ್ರರ ದಾಳಿಗೆ ಇಂದಿಗೆ (ಫೆ.14) ಎರಡು ವರ್ಷವಾಗಿದೆ. ಭಾರತೀಯರು ವೀರ ಯೋಧರ ಬಲಿದಾನವನ್ನು ನೆನಪಿಸಿದ್ದು, ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.
2019ರಲ್ಲಿ ಫೆಬ್ರವರಿ 14ರಂದು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭದ್ರತಾ ಸಿಬ್ಬಂದಿಯನ್ನು ಸಾಗಿಸುವ ವಾಹನದ ಮೇಲೆ ಪುಲ್ವಾಮಾದ ಅವಾಂತಿಪೋರಾ ಬಳಿ ಐಇಡಿ ತುಂಬಿದ ಆತ್ಮಹತ್ಯಾ ಬಾಂಬರ್ ದಾಳಿ ನಡೆಸಲಾಯಿತು. ಈ ದಾಳಿಯಿಂದಾಗಿ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) 40 ಯೋಧರು ಹುತ್ಮಾತರಾದರು.
ಬಳಿಕ ದಾಳಿಯ ಜವಾಬ್ದಾರಿಯನ್ನು ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಜೈಶ್-ಎ-ಮೊಹಮ್ಮದ್ (ಜೆಎಂ) ಹೊಣೆಯನ್ನು ಹೊತ್ತುಕೊಂಡಿತು.
ಜಮ್ಮುವಿನಿಂದ ಶ್ರೀನಗರಕ್ಕೆ 2,500ಕ್ಕಿಂತ ಹೆಚ್ಚು ಸಿಆರ್‌ಪಿಎಫ್ ಯೋಧರು 78 ವಾಹನಗಳಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ 22 ವರ್ಷದ ಆತ್ಮಹತ್ಯಾ ಬಾಂಬರ್ ಆದಿಲ್ ಅಹ್ಮದ್ ದಾರ್ ಸ್ಫೋಟಕ ತುಂಬಿದ ವಾಹನದೊಂದಿಗೆ ಬಸ್‌ಗೆ ದಾಳಿ ನಡೆಸಿದರು.
ಇದಾದ ಬಳಿಕ ಪಾಕಿಸ್ತಾನ ಬಾಲಕೋಟ್ ಉಗ್ರ ತರಬೇತಿ ಶಿಬಿರಕ್ಕೆ ವೈಮಾನಿಕ ದಾಳಿಯೊಂದಿಗೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಭಾರತ ತಿರುಗೇಟು ನೀಡಿತ್ತು.
ಪ್ರಸ್ತುತ ಪುಲ್ವಾಮಾ ದಾಳಿಯ ಕಹಿ ನೆನಪು ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದ್ದು, ಭಾರತೀಯರು ನಾವು ಎಂದಿಗೂ ಮರೆಯುವುದಿಲ್ಲ, ಎಂದಿಗೂ ಕ್ಷಮಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.