ಅಹಮದಾಬಾದ್: ಜಗತ್ತಿನ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಐತಿಹಾಸಿಕ ದಾಖಲೆ ಬರೆದಿದೆ. ಕ್ರೀಡಾಂಗಣದಲ್ಲಿ ಆಡಿದ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲೇ ಟೀಂ ಇಂಡಿಯಾ ಗೆಲುವು ದಾಖಲಿಸಿದೆ.
ಇಂಗ್ಲೆಂಡ್ ವಿರುದ್ಧ ಮೊನ್ನೆ ಆರಂಭವಾಗಿದ್ದ ಮೂರನೇ ಟೆಸ್ಟ್ಟ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ಕೇವಲ 112 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಬ್ಯಾಟ್ ಮಾಡಿದ್ದ ಟೀಂ ಇಂಡಿಯಾ 145 ರನ್ ಗಳಿಗೆ ಆಲೌಟ್ ಆಗಿದ್ದು 33 ರನ್ ಗಳ ಮುನ್ನಡೆ ಸಾಧಿಸಿತ್ತು.
ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್ 81 ರನ್ ಗಳಿಗೆ ಆಲೌಟ್ ಆಗಿದ್ದು ಭಾರತಕ್ಕೆ ಗೆಲ್ಲಲು 49 ರನ್ ಗಳ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ಆರಂಭಿಕರಾದ ರೋಹಿತ್ ಶರ್ಮಾ ಅಜೇಯ 25 ಮತ್ತು ಶುಭ್ಮನ್ ಗಿಲ್ ಅಜೇಯ 15 ರನ್ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಈ ಮೂಲಕ ಭಾರತ ಭರ್ಜರಿ 10 ವಿಕೆಟ್ ಗಳ ಗೆಲವು ಸಾಧಿಸಿದೆ.
ಇದಕ್ಕೂ ಮುನ್ನ ಅಂದರೆ 2018ರಲ್ಲಿ ಆಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಎರಡನೇ ದಿನಕ್ಕೆ ಗೆಲುವು ಸಾಧಿಸಿತ್ತು. ಆದರೆ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎರಡೇ ದಿನದಲ್ಲಿ ಮಣಿಸಿರುವುದು ಭಾರತದ ಮಟ್ಟಿಗೆ ದೊಡ್ಡ ಸಾಧನೆ ಆಗಿದೆ.
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 2-1 ಅಂತರದಿಂದ ಮುನ್ನಡೆ ಸಾಧಿಸಿದೆ.