ಕೊಲ್ಕತ್ತಾ: ದೇಶದಲ್ಲಿ ಮಾರಕ ಕೊರೋನಾ ವೈರಸ್ ನ 2ನೇ ಅಲೆಯ ಭೀತಿ ಆರಂಭವಾಗಿರುವಂತೆಯೇ ಇತ್ತ ಕೋಲ್ಕತಾದಲ್ಲಿ ವಿಚಿತ್ರ ಸೋಂಕು ಭಾರಿ ಸದ್ದು ಮಾಡುತ್ತಿದ್ದು, ಕೇವಲ 3 ದಿನಗಳ ಅಂತರದಲ್ಲಿ ಬರೊಬ್ಬರಿ 200 ನಾಯಿಗಳು ಸೋಂಕಿನಿಂದಾಗಿ ಸಾವನ್ನಪ್ಪಿವೆ ಎನ್ನಲಾಗಿದೆ.
ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದು, ಕಳೆದ ಮೂರು ದಿನಗಳಲ್ಲಿ 200ಕ್ಕೂ ಹೆಚ್ಚು ಶಾನ್ವಗಳು ಸಾವನ್ನಪ್ಪಿದೆ. ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಬಿಷ್ಣುಪುರ ನಗರದಲ್ಲಿ ಈ ಘಟನೆ ನಡೆದಿದ್ದು, ನಾಯಿಗಳ ದಿಢೀರ್ ಸಾವಿಗೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಮೂಲಗಳ ಪ್ರಕಾರ ಕಳೆದ ಮಂಗಳವಾರ 60, ಬುಧವಾರ 97, ಗುರುವಾರ 45 ಸೇರಿದಂತೆ ಮೂರು ದಿನಗಳಲ್ಲಿ ಸುಮಾರು 200 ನಾಯಿಗಳು ಸಾವನ್ನಪ್ಪಿವೆ. ಈ ಕುರಿತಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದ್ದು, ಮೃತಪಟ್ಟ ನಾಯಿಗಳ ದ್ರವವನ್ನು ಸಂಗ್ರಹಿಸಿ ಕೊಲ್ಕತ್ತಾಗೆ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ನಾಯಿಗಳ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ.
ಸಾವನ್ನಪ್ಪಿದ ನಾಯಿಗಳನ್ನು ಬಿಷ್ಣುಪುರ ಪುರಸಭೆ ಸಿಬ್ಬಂದಿಗಳು ಸಾಮೂಹಿಕವಾಗಿ ಡಂಪಿಂಗ್ ಮಾಡಿದ್ದಾರೆ ಎನ್ನಲಾಗಿದೆ.
ನಾಯಿಗಳ ಸಾವಿಗೆ ನಿಗೂಢ ಸೋಂಕು ಕಾರಣ ಎಂದು ಶಂಕಿಸಲಾಗಿದ್ದು, ಸಾಮಾನ್ಯವಾಗಿ ಬಂಗಾಳದಲ್ಲಿ ನಾಯಿಗಳಿಗೆ ಈ ಸಮಯದಲ್ಲಿ ಸೋಂಕು ಸಾಮಾನ್ಯ. ಈ ಕುರಿತು ಆತಂಕ ಪಡುವ ಅಗತ್ಯವಿಲ್ಲ. ನಾಯಿಗಳಿಗೆ ಹರಡಿದ ಸೋಂಕು ಇತರ ಪ್ರಾಣಿ ಅಥವಾ ಮನುಷ್ಯರಿಗೆ ಹರಡುವ ಸಾಧ್ಯತೆ ಇಲ್ಲ. ನಾಯಿಗಳ ದ್ರವವನ್ನು ಪಡೆದಿದ್ದೇವೆ ಪರೀಕ್ಷೆ ಮಾಡುತ್ತೇವೆ ಎಂದು ಸರ್ಕಾರಿ ಪಶುವೈದ್ಯರು ಹೇಳಿದ್ದಾರೆ.