ನವದೆಹಲಿ: ದೇಶದ 135 ಕೋಟಿ ಜನರ ಪೈಕಿ ಪ್ರತಿ ನಾಲ್ವರಲ್ಲಿ ಒಬ್ಬರಿಗೆ ಕೋವಿಡ್-19 ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಸರ್ಕಾರ ನಡೆಸಿರುವ ಸೆರೋಲಾಜಿಕಲ್ ಸಮೀಕ್ಷೆಯ ಬಗ್ಗೆ ನೇರ ಮಾಹಿತಿಯುಳ್ಳ ಮೂಲಗಳು ತಿಳಿಸಿವೆ. ಅಧಿಕೃತವಾಗಿ ವರದಿಯಾಗಿರುವುದಕ್ಕಿಂತಲೂ ದೇಶದ ಕೋವಿಡ್-19 ಪೀಡಿತರ ಸಂಖ್ಯೆ ಹಲವು ಪಟ್ಟು ಹೆಚ್ಚಿರಬಹುದು ಎನ್ನಲಾಗಿದೆ.
ದೇಶದಲ್ಲಿ ದೃಢಪಟ್ಟ ಕೋವಿಡ್ ಪ್ರಕರಣಗಳ ಸಂಖ್ಯೆ 1.08 ಕೋಟಿ ತಲುಪಿದೆ. ಅತಿಹೆಚ್ಚು ಮಂದಿಗೆ ಸೋಂಕು ತಗುಲಿರುವ ದೇಶಗಳ ಪಟ್ಟಿಯಲ್ಲಿ ಸದ್ಯ ಅಮೆರಿಕದ ನಂತರದ ಸ್ಥಾನದಲ್ಲಿದೆ ಭಾರತ. ಆದರೆ, ಸಮೀಕ್ಷಾ ವರದಿ ಪ್ರಕಾರ ದೇಶದಲ್ಲಿ 30 ಕೋಟಿಗೂ ಹೆಚ್ಚು ಜನರಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) ಸಮೀಕ್ಷೆ ನಡೆಸಿದ್ದು, ಈ ಕುರಿತ ಮಾಹಿತಿಯನ್ನು ಗುರುವಾರ ಪತ್ರಿಕಾಗೋಷ್ಠಿ ಮೂಲಕ ಹಂಚಿಕೊಳ್ಳುವುದಾಗಿ ತಿಳಿಸಿದೆ. ಅಧಿಕೃತ ಘೋಷಣೆ ಬಗ್ಗೆ ಮಾಹಿತಿ ನೀಡಲು ಮೂಲಗಳು ನಿರಾಕರಿಸಿವೆ.
ಇತ್ತೀಚೆಗೆ ನಡೆಸಲಾದ ಸಮೀಕ್ಷೆಯಲ್ಲಿ ಎಷ್ಟು ಮಂದಿ ಭಾಗವಹಿಸಿದ್ದಾರೆ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.
ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ನಡೆಸಲಾಗಿದ್ದ ಇನ್ನೊಂದು ಸಮೀಕ್ಷೆ ಪ್ರಕಾರ, ಪ್ರತಿ 15 ಭಾರತೀಯರಲ್ಲಿ ಒಬ್ಬರು ಕೋವಿಡ್-19 ಪ್ರತಿಕಾಯಗಳನ್ನು ಹೊಂದಿದ್ದಾರೆ. ಜನಸಾಂಧ್ರತೆ ಹೆಚ್ಚಿರುವ ನಗರ ಪ್ರದೇಶ ಮತ್ತು ಕೊಳಗೇರಿಗಳಲ್ಲಿ ಪ್ರತಿ ಆರು ಮಂದಿಯಲ್ಲಿ ಒಬ್ಬರು ಕೋವಿಡ್-19 ಪ್ರತಿಕಾಯಗಳನ್ನು ಹೊಂದಿದ್ದಾರೆ ಎಂದು ಐಸಿಎಂಆರ್ ತಿಳಿಸಿತ್ತು. 10 ವರ್ಷ ವಯಸ್ಸಿಗಿಂತ ಮೇಲ್ಪಟ್ಟ 29,000ಕ್ಕೂ ಹೆಚ್ಚು ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.
ದೆಹಲಿಯ ಒಟ್ಟು ನಿವಾಸಿಗಳಲ್ಲಿ ಅರ್ಧಕ್ಕೂ ಹೆಚ್ಚು ಮಂದಿಗೆ ಕೋವಿಡ್-19 ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಈ ವಾರ ಸರ್ಕಾರ ಬಿಡುಗಡೆ ಮಾಡಿರುವ ಸಮೀಕ್ಷೆ ತಿಳಿಸಿದೆ.
ರಾಷ್ಟ್ರ ರಾಜಧಾನಿಯ ಶೇ 56.13ರಷ್ಟು ಜನ ಕೋವಿಡ್-19 ವಿರುದ್ಧ ಪ್ರತಿಕಾಯಗಳನ್ನು (ಆಯಂಟಿಬಾಡಿ) ಹೊಂದಿರುವುದು ಸೆರೋಲಾಜಿಕಲ್ ಸಮೀಕ್ಷೆಯಿಂದ ತಿಳಿದುಬಂದಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮಂಗಳವಾರ ಹೇಳಿದ್ದರು.