ಕಾಸರಗೋಡು: ಮಕ್ಕಳ ವಿರುದ್ಧ ನಡೆಯುವ ದೌರ್ಜನ್ಯ ನಿಯಂತ್ರಣಕ್ಕೆ ಚೈಲ್ಡ್ ಲೈನ್ ಸಂಸ್ಥೆ ಪೂರಕ ಚಟುವಟಿಕೆ ನಡೆಸುತ್ತಿದ್ದು, ಈ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ 2020 ಏಪ್ರಿಲ್ ತಿಂಗಳಿಂದ 2021 ಜನವರಿ ತಿಂಗಳ ವರೆಗೆ 329 ಕೇಸುಗಳು ದಾಖಲಿಸಿದೆ.
ಈ ನಿಟ್ಟಿನಲ್ಲಿ ಮಕ್ಕಳ ಮೇಲೆ ನಡೆಸಲಾದ ಲೈಂಗಿಕ ದೌರ್ಜನ್ಯ ಸಂಬಂಧ 50 ಕೇಸುಗಳು, ದೈಹಿಕ ಹಿಂಸೆ ಸಂಬಂಧ 41 ಕೇಸುಗಳು ದಾಖಲುಗೊಂಡಿವೆ. 120 ಕೇಸುಗಳನ್ನು ಮುಂದಿನ ಕ್ರಮಗಳಿಗಾಗಿ ಚೈಲ್ಡ್ ವೆಲ್ ಫೇರ್ ಸಮಿತಿಯ ಮುಂದೆ ಹಾಜರುಪಡಿಸಲಾಗಿದೆ.
ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಚೈಲ್ಡ್ ಲೈನ್ ಸಲಹಾ ಸಮಿತಿ ಸಭೆಯಲ್ಲಿ ಈ ವಿಚಾರ ಮಂಡಿಸಲಾಗಿದೆ. ಸಂಸ್ಥೆಯ ಜಿಲ್ಲಾ ಸಂಚಾಲಕ ಅನೀಷ್ ಜೋಸ್ ವರದಿ ವಾಚಿಸಿದರು. ಸಹಾಯಕ ಜಿಲ್ಲಾಧಿಕಾರಿ(ಎಲ್.ಆರ್.) ಎಂ.ಕೆ.ಷಾಜಿ ಅಧ್ಯಕ್ಷತೆ ವಹಿಸಿದ್ದರು.
ಮಕ್ಕಳ ಸಂರಕ್ಷಣೆ ವ್ಯವಸ್ಥೆಗಳ ಕುರಿತು ಮಾಹಿತಿ ನೀಡುವ ಭಿತ್ತಿಪತ್ರಗಳ ಬಿಡುಗಡೆ ಸಭೆಯಲ್ಲಿ ಜರುಗಿತು.
ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷೆ ನ್ಯಾಯವಾದಿ ಎಸ್.ಎನ್.ಸರಿತಾ, ಶಿಶು ಸಂರಕ್ಷಣೆ ಅಧಿಕಾರಿ ಸಿ.ಎಂ.ಸಿಂಧು, ಸಿ.ಡಬ್ಲ್ಯೂ.ಸಿ. ಸದಸ್ಯ ಮಣಿ ಜಿ.ನಾಯರ್, ಚೈಲ್ಡ್ ಲೈನ್ ನೋಡೆಲ್ ನಿರ್ದೇಶಕ ಮ್ಯಥ್ಯೂ ಸಾಮುವೆಲ್, ಕಾನೂನು ಸೇವಾ ಪ್ರಾಧಿಕಾರ ವಿಭಾಗ ಅಧಿಕಾರಿ ದಿನೇಶ ಎ., ಬೆಂಬಲ ನಿರ್ದೇಶಕ ಸುಧಾಕರನ್ ತಯ್ಯಿಲ್ ಉಪಸ್ಥಿತರಿದ್ದರು.