ನವದೆಹಲಿ: ದೇಶದಲ್ಲಿ ಸಕ್ರಿಯ ಕೋವಿಡ್ -19 ಪ್ರಕರಣಗಳ ಸಂಖ್ಯೆ 1.1 ಲಕ್ಷಕ್ಕೆ ಇಳಿದಿದ್ದು, 33 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 5000 ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.
ಬುಧವಾರ ದಮನ್ ಮತ್ತು ದಿಯು, ದಾದ್ರಾ ಮತ್ತು ನಗರ್ ಹವೇಲಿ ಪ್ರಸ್ತುತ ಶೂನ್ಯ ಸಕ್ರಿಯ ಪ್ರಕರಣಗಳನ್ನು ಹೊಂದಿವೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಕಳೆದ 24 ಗಂಟೆಗಳ ದೇಶದಲ್ಲಿ ಒಟ್ಟು 11,067 ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದೇ ಅವಧಿಯಲ್ಲಿ 13,087 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ದೇಶದ ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಶೇಕಡಾ 71 ರಷ್ಟು ಕೇರಳ ಮತ್ತು ಮಹಾರಾಷ್ಟ್ರದಲ್ಲಿವೆ ಎಂದು ಸಚಿವಾಲಯ ತಿಳಿಸಿದೆ.
ಭಾರತದಲ್ಲಿ ಕೊರೋನಾ ವೈರಸ್ ಸೋಂಕಿನಿಂದ ಪ್ರಾಣ ಬಿಡುತ್ತಿರುವವರ ಸಂಖ್ಯೆಯಲ್ಲೂ ಗಣನೀಯ ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೊವಿಡ್-19 ಮಹಾಮಾರಿಗೆ 94 ಮಂದಿ ಸಾವನ್ನಪ್ಪಿದ್ದಾರೆ. ಆದರೆ 19 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೋನಾ ವೈರಸ್ ಸೋಂಕಿನಿಂದ ಒಂದೇ ಒಂದು ಸಾವು ವರದಿಯಾಗಿಲ್ಲ.
ಉತ್ತರ ಪ್ರದೇಶ, ದೆಹಲಿ, ರಾಜಸ್ಥಾನ, ಒಡಿಶಾ, ಆಂಧ್ರ ಪ್ರದೇಶ, ಜಮ್ಮು ಕಾಶ್ಮೀರ, ಜಾರ್ಖಂಡ್, ಪುದುಚೇರಿ, ಮಣಿಪುರ್, ನಾಗಾಲ್ಯಾಂಡ್, ಲಕ್ಷದ್ವೀಪ, ಮೇಘಾಲಯ, ಸಿಕ್ಕಿಂ, ಲಡಾಖ್, ಮಿಜೋರಾಂ, ಅರುಣಾಚಲ ಪ್ರದೇಶ, ತ್ರಿಪುರಾ, ದಿಯು ಮತ್ತು ದಮನ್ ನಲ್ಲಿ ಒಂದೇ ಒಂದು ಸಾವಿನ ಪ್ರಕರಣಗಳು ದಾಖಲಾಗಿಲ್ಲ.