ಸಿಧಿ/ರೇವಾ/ಭೋಪಾಲ್: ಮಧ್ಯ ಪ್ರದೇಶದ ಸಿಧಿ ಜಿಲ್ಲೆಯ ಪಾಟ್ನಾ ಗ್ರಾಮದ ಬಳಿ ಮಂಗಳವಾರ ಬೆಳಗ್ಗೆ ಬಸ್ಸೊಂದು ಸೇತುವೆಯಿಂದ ಕಾಲುವೆಗೆ ಉರುಳಿ ಬಿದ್ದಿದ್ದು, ಏಳು ಮಹಿಳೆಯರು ಸೇರಿದಂತೆ ಕನಿಷ್ಠ 35 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಇತರ ಹಲವು ಪ್ರಯಾಣಿಕರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈವರೆಗೆ ಕಾಲುವೆಯಿಂದ 35ಕ್ಕೂ ಹೆಚ್ಚು ಶವಗಳನ್ನು ಹೊರತೆಗೆಯಲಾಗಿದೆ. ಸಾವಿನ ಸಂಖ್ಯೆ 40 ದಾಟಬಹುದು ಎಂದು ಇನ್ಸ್‌ಪೆಕ್ಟರ್ ಜನರಲ್(ರೇವಾ ವಲಯ) ಉಮೇಶ್ ಜೋಗಾ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ ಕನಿಷ್ಠ 20 ಪ್ರಯಾಣಿಕರು ನಾಪತ್ತೆಯಾಗಿದ್ದಾರೆಂದು ಆತಂಕ ವ್ಯಕ್ತಪಡಿಸಿದ್ದಾರೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇಂದು ಬೆಳಗ್ಗೆ 8.30 ರ ಸುಮಾರಿಗೆ ಸಿಧಿ ಜಿಲ್ಲಾ ಕೇಂದ್ರ ಕಚೇರಿಯಿಂದ 80 ಕಿ.ಮೀ ದೂರದಲ್ಲಿರುವ ಪಾಟ್ನಾ ಗ್ರಾಮದ ಬಳಿ ಇರುವ ಕಾಲುವೆಗೆ ಬಸ್ ಬಿದ್ದಿದ್ದು, ಏಳು ಜನ ಈಜಿ ಸುರಕ್ಷಿತವಾಗಿ ಹೊರ ಬಂದಿದ್ದಾರೆ ಎಂದು ಜೋಗಾ ಅವರು ತಿಳಿಸಿದ್ದಾರೆ.
ಅಪಘಾತಕ್ಕೀಡಾದ ಬಸ್ ನಲ್ಲಿ ಕನಿಷ್ಠ 50 ಪ್ರಯಾಣಿಕರಿದ್ದರು ಎನ್ನಲಾಗಿದೆ.
ಬೆಳಗ್ಗೆ ಬಸ್ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿತ್ತು. ಕಾಲುವೆಯ ನೀರಿನ ಪ್ರಮಾಣ ಕಡಿಮೆ ಮಾಡಿದ ನಂತರವೇ ದೂರದಲ್ಲಿ ಬಸ್ ಕಾಣಿಸಿಕೊಂಡಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರು ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಿದ್ದು, ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.