ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಬರೋಬ್ಬರಿ ಒಂದೂವರೆ ವರ್ಷದ ನಂತರ 4ಜಿ- ಹೈಸ್ಪೀಡ್ ಮೊಬೈಲ್ ಇಂಟರ್‍ನೆಟ್ ಸೇವೆಯನ್ನು ಶುಕ್ರವಾರ ಮರುಸ್ಥಾಪಿಸಲಾಗಿದೆ.
2019ರ ಆಗಸ್ಟ್‍ನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಕಣಿವೆಯಲ್ಲಿ ಹೈಸ್ಪೀಡ್ ಇಂಟರ್‍ನೆಟ್ ಸೇವೆಯನ್ನು ರದ್ದುಗೊಳಿಸಲಾಗಿತ್ತು. ಈ ಕುರಿತು ನಿನ್ನೆ ಟ್ವೀಟ್ ಮಾಡಿರುವ ಜಮ್ಮು ಮತ್ತು ಕಾಶ್ಮೀರ ಆಡಳಿತದ ವಕ್ತಾರ ರೋಹಿತ್ ಕನ್ಸಾಲ್ ಅವರು, '4ಜಿ ಮೊಬೈಲ್ ಇಂಟರ್‍ನೆಟ್ ಸೇವೆಗಳನ್ನು ಇಡೀ ಜಮ್ಮು ಮತ್ತು ಕಾಶ್ಮೀರದಲ್ಲಿ ಮರು ಸ್ಥಾಪಿಸಲಾಗುತ್ತಿದೆ' ಎಂದು ಮಾಹಿತಿ ನೀಡಿದ್ದಾರೆ.
ಮೂಲಗಳ ಪ್ರಕಾರ, ಇಂಟರ್‍ನೆಟ್ ಸೇವೆಗಳು ನಿನ್ನೆ ಮಧ್ಯರಾತ್ರಿಯಿಂದಲೇ ಪುನರಾರಂಭಗೊಂಡಿದೆ. 2019ರ ಆಗಸ್ಟ್5ರಂದು ಜಮ್ಮು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನಗಳನ್ನು ರದ್ದುಪಡಿಸಿ, ಜಮ್ಮು ಕಾಶ್ಮೀರ ಮತ್ತು ಲಡಾಕ್ ಅನ್ನು ವಿಭಜಿಸಿ ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಲಾಗಿತ್ತು. ಅಂದಿನಿಂದ ಇಲ್ಲಿವಯವರೆಗೆ ಅಂದರೆ 18 ತಿಂಗಳವರೆಗೆ ಇಂಟರ್‍ನೆಟ್ ಸೇವೆಗಳಲ್ಲಿ ವತ್ಯಯ ಉಂಟಾಗಿತ್ತು.
ಕಳೆದ ವರ್ಷ ಆಗಸ್ಟ್‍ನಲ್ಲಿ ಕಾಶ್ಮೀರದ ಗಂದರ್ ಬಾಲ್ ಮತ್ತು ಜಮ್ಮು ಪ್ರದೇಶದ ಉಧಂಪುರ್ ಎಂಬ ಎರಡು ಜಿಲ್ಲೆಗಳಲ್ಲಿ ಹೈಸ್ಪೀಡ್ ಮೊಬೈಲ್ ಇಂಟರ್‍ನೆಟ್ ಸೇವೆಗಳನ್ನು ಮರುಸ್ಥಾಪಿಸಲಾಗಿತ್ತು.