ಕಾಸರಗೋಡು: ಕಾಸರಗೋಡು ಜಿಲ್ಲೆಯ ಉನ್ನತ ಶಿಕ್ಷಣ ವಲಯದ 4 ಯೋಜನೆಗಳು ಮಂಗಳವಾರ ಉದ್ಘಾಟನೆಗೊಂಡಿವೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆನ್ಲೈನ್ ಮೂಲಕ ಇವುಗಳಿಗೆ ಚಾಲನೆ ನೀಡಿದರು.
ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ನೂತನವಾಗಿ ನಿರ್ಮಿಸಿರುವ ಕ್ಯಾಂಟೀನ್ ಕಟ್ಟಡ ಮತ್ತು ವಿದ್ಯಾರ್ಥಿನಿಯರ ವಿಶ್ರಾಂತಿ ಕೊಠಡಿ, ಉದುಮಾ ಕಲಾ-ವಿಜ್ಞಾನ ಕಾಲೇಜಿನ ನೂತನ ಕಟ್ಟಡ, ಪೆರಿಯ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ನೂತನ ಕಟ್ಟಡ, ತ್ರಿಕರಿಪುರ ಇ.ಕೆ.ನಾಯನಾರ್ ಸ್ಮಾರಕ ಸರಕಾರಿ ಕಾಲೇಜಿನ ಕಟ್ಟಡ ಸಮುಚ್ಚಯಗಳು ಈ ವೇಳೆ ಲೋಕಾರ್ಪಣೆಗೊಂಡುವು. ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್ ಅಧ್ಯಕ್ಷತೆ ವಹಿಸಿದ್ದರು. ಪ್ರತಿ ಸಂಸ್ಥೆಗಳಲ್ಲೂ ಪ್ರತ್ಯೇಕ ಸಮಾರಂಭಗಳೂ ಜರುಗಿದುವು.
ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಈ ಸಂಬಂಧ ಜರುಗಿದ ಸಮಾರಂಭದಲ್ಲಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕ ಎನ್.ಎ.ನೆಲ್ಲಿಕುನ್ನು ಮುಖ್ಯ ಅತಿಥಿಯಾಗಿದ್ದರು. ನಗರಸಭೆ ಸದಸ್ಯೆ ಸವಿತಾ, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್, ಕಣ್ಣೂರು ವಿವಿ ಸೆನೆಟ್ ಸದಸ್ಯ ಡಾ.ಕೆ.ವಿಜಯನ್, ರಕ್ಷಕ-ಶಿಕ್ಷಕ ಸಮಘದ ಉಪಾಧ್ಯಕ್ಷ ಬಿ.ಎಚ್.ಅಬ್ದುಲ್ ಖಾದರ್ ಮೊದಲಾದವರು ಉಪಸ್ಥಿತರಿದ್ದರು. ಲೋಕೋಪಯೋಗಿ ಇಲಾಖೆ ಕಟ್ಟಡ ವಿಭಾಗ ಇಂಜಿನಿಯರ್ ಕೆ.ರವಿಕುಮಾರ್ ವರದಿ ವಾಚಿಸಿದರು. ಕಾಲೇಜು ಪ್ರಾಂಶುಪಾಲ ಡಾ.ಎ.ಎಲ್.ಅನಂತಪದ್ಮನಾಭ ವಂದಿಸಿದರು.