ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರು ಕರೆ ನೀಡಿರುವ ಚಕ್ಕ ಜಾಮ್ ಬೆಂಬಲಿಸಿ ಪ್ರತಿಭಟನೆ ನಡೆಸುತ್ತಿದ್ದ ಆರೋಪದ ಮೇರೆಗೆ ಸೆಂಟ್ರಲ್ ದೆಹಲಿಯ ಶಾಹೀದ್ ಪಾರ್ಕ್ ನಲ್ಲಿ ಸುಮಾರು 50 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ಇಂಟರ್ ನೆಟ್ ಸ್ಥಗಿತ, ಪೊಲೀಸರಿಂದ ಕಿರುಕುಳ ಮತ್ತಿತರ ಸಮಸ್ಯೆಗಳ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ದೇಶಾದ್ಯಂತ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೂ ಚಕ್ಕ ಜಾಮ್ ಪ್ರತಿಭಟನೆ ನಡೆಸಿ, ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳನ್ನು ತಡೆದು ಕೃಷಿ ಕಾನೂನುಗಳ ರದ್ದತಿಗೆ ಒತ್ತಾಯಿಸಿದರು.
ಶಾಂತಿಯುತ ರೀತಿಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲೂ ಟಕ್ಕ ಜಾಮ್ ಪ್ರತಿಭಟನೆ ನಡೆಯುತ್ತಿದ್ದು, ದೆಹಲಿ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದಾರೆ. ಯಾವುದೇ ಅಹಿತಕರ ಘಟನೆ ಉಂಟಾಗದಂತೆ ಅರಸೇನಾ ಪಡೆಯ ಸಾವಿರಾರು ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.
ಗಣರಾಜ್ಯೋತ್ಸವ ದಿನ ಹಿಂಸಾಚಾರ ಸಂಭವಿಸಿದ ನಂತರ ಬಿಗಿ ಭದ್ರತೆ ಒದಗಿಸಲಾಗಿದ್ದು, ನಗರ ಹಾಗೂ ಗಡಿ ಪ್ರದೇಶಗಳಲ್ಲಿ ಸೂಕ್ತ ಮುನ್ನೆಚ್ಛರಿಕೆ ವಹಿಸಲಾಗಿದೆ.