ನವದೆಹಲಿ: ಮಾರ್ಚ್‍ನಲ್ಲಿ ಕೋವಿಡ್ -19 ವ್ಯಾಕ್ಸಿನೇಷನ್‍ನ ಮೂರನೇ ಆದ್ಯತೆಯ ಗುಂಪು - 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರು ಶುಕ್ರವಾರ ಲೋಕಸಭೆಗೆ ತಿಳಿಸಿದ್ದಾರೆ.
ದೇಶದಲ್ಲಿ ಜನವರಿ 16 ರಿಂದ ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದ್ದು, ಫೆಬ್ರವರಿ 3 ರಿಂದ ಎರಡನೇ ಹಂತದಲ್ಲಿ ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ.
ಸುಮಾರು 2 ಕೋಟಿ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುವ ಎರಡನೇ ಹಂತದ ಅಭಿಯಾನ ಪ್ರಗತಿಯಲ್ಲಿರುವ ಕಾರಣ, ಮೂರನೇ ಹಂತದ ಲಸಿಕೆ ಆರಂಭಿಸುವ ಬಗ್ಗೆ ಯಾವುದೇ ನಿಗದಿತ ದಿನಾಂಕ ಘೋಷಿಸುವುದು ಕಷ್ಟ, ಆದರೆ ವ್ಯಾಕ್ಸಿನೇಷನ್ ಡ್ರೈವ್‍ನ ಮೂರನೇ ಹಂತ ಮಾರ್ಚ್ ಎರಡು, ಮೂರು ಅಥವಾ ನಾಲ್ಕನೇ ವಾರದಲ್ಲಿ ಪ್ರಾರಂಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಹರ್ಷ್ ವರ್ಧನ್ ಅವರು ಹೇಳಿದ್ದಾರೆ.
ನಿನ್ನೆ ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, "ಕೋವಿಡ್-19 ಲಸಿಕೆಯ ಮೂರನೇ ಹಂತದ ಡ್ರೈವ್ 50 ವರ್ಷಕ್ಕಿಂತ ಮೇಲ್ಪಟ್ಟ ಅತ್ಯಂತ ದುರ್ಬಲ ಜನರನ್ನು ಒಳಗೊಳ್ಳುತ್ತದೆ" ಎಂದರು.