ಚೆನ್ನೈ: ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 317ರನ್ ಗಳ ಭಾರಿ ಅಂತರದ ಗೆಲುವು ಸಾಧಿಸಿದ್ದು, ಇದು ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸಾಧಿಸಿದ ಅತಿ ದೊಡ್ಡ ಗೆಲುವಾಗಿದೆ.
ಇಂದು ಚೆನ್ನೈನಲ್ಲಿ ಮುಕ್ತಾಯವಾದ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಭಾರತ ತಂಡ 317ರನ್ ಗಳ ಭಾರಿ ಅಂತರದಲ್ಲಿ ಮಣಿಸಿದ್ದು, ಭಾರತ ಇಂಗ್ಲೆಂಡ್ ತಂಡದ ವಿರುದ್ಧ ಸಾಧಿಸಿದ ಅತಿ ದೊಡ್ಡ ಗೆಲುವು ಇದಾಗಿದೆ. ಈ ಹಿಂದೆ 1986ರಲ್ಲಿ ಲೀಡ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು 279 ರನ್ ಗಳ ಅಂತರದಲ್ಲಿ ಮಣಿಸಿತ್ತು. ಇದು ಈ ವರೆಗಿನ ದೊಡ್ಡ ಗೆಲುವಾಗಿತ್ತು. ಆದರೆ ಇಂದು ಈ ಗೆಲುವನ್ನೂ ಮೀರಿಸುವಂತೆ 317ರನ್ ಗಳ ಅಂತರದಲ್ಲಿ ಜಯ ಸಾಧಿಸಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಂ ಇಂಡಿಯಾಗೆ ಇದು 5ನೇ ಐತಿಹಾಸಿಕ ಗೆಲುವಾಗಿದ್ದು, ಅತಿ ಹೆಚ್ಚು ರನ್ ಗಳ ಅಂತರದಲ್ಲಿ ಗೆದ್ದ ಪಂದ್ಯಗಳ ಪಟ್ಟಿಯಲ್ಲಿ ಇಂದಿನ ಪಂದ್ಯ ಐದನೇ ಸ್ಥಾನದಲ್ಲಿದೆ. ಈ ಹಿಂದೆ ಭಾರತ 2015/16ರಲ್ಲಿ ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಪ್ರಿಕಾ ತಂಡವನ್ನು 337 ರನ್ ಗಳ ಅಂತರದಲ್ಲಿ ಮಣಿಸಿತ್ತು. ಇದು ಭಾರತ ತಂಡದ ಅತೀ ದೊಡ್ಡ ಗೆಲುವಾಗಿದೆ. 2ನೇ ಸ್ಥಾನದಲ್ಲಿ 2016/17 ರಲ್ಲಿ ಇಂದೋರ್ ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯವಿದ್ದು, ಈ ಪಂದ್ಯವನ್ನು ಭಾರತ 321ರನ್ ಗಳ ಅಂತರದಲ್ಲಿ ಜಯಿಸಿತ್ತು.
ಬಳಿಕ 2008/09 ಮೊಹಾಲಿಯಲ್ಲಿ ಆಸ್ಚ್ರೇಲಿಯಾವನ್ನು 320 ರನ್ ಗಳ ಅಂತರದಲ್ಲಿ ಭಾರತ ಮಣಿಸಿತ್ತು. 2019 ರಲ್ಲಿ ನಾರ್ಥ್ ಸೌಂಡ್ ನಲ್ಲಿ ವಿಂಡೀಸ್ ತಂಡವನ್ನು 318ರನ್ ಗಳ ಅಂತರದಲ್ಲಿ ಭಾರತ ಮಣಿಸಿತ್ತು. ಇದೀಗ ಈ ಪಟ್ಟಿಗೆ ಇಂದಿನ ಪಂದ್ಯ ಸೇರ್ಪಡೆಯಾಗಿದೆ.