ನವದೆಹಲಿ: ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಪಕ್ಷಗಳು ಪ್ರತಿಭಟನೆ ಮುಂದುವರೆಸಿದ್ದರಿಂದ ಲೋಕಸಭಾ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.
ನಿನ್ನೆ ಸಂಜೆ 4 ಗಂಟೆಗೆ ಸದನ ಮತ್ತೆ ಸಭೆ ಸೇರಿದ ನಂತರವೂ ಕಾಂಗ್ರೆಸ್, ಎಡ ಪಕ್ಷಗಳು ಮತ್ತು ಡಿಎಂಕೆ ಸದಸ್ಯರು ಸದನಗ ಬಾವಿಗೆ ನುಗ್ಗಿ ಹೊಸ ಕಾನೂನುಗಳ ವಿರುದ್ಧ ಘೋಷಣೆಗಳನ್ನು ಕೂಗಿ, ಫಲಕಗಳನ್ನು ಪ್ರದರ್ಶಿಸಿದರು. ಸ್ಪೀಕರ್ ಓಂ ಬಿರ್ಲಾ ಅವರು, ವ್ಯಾಕ್ಸಿನೇಷನ್‍ಗೆ ಸಂಬಂಧಿಸಿದ ಪ್ರಮುಖ ವಿಷಯವೊಂದನ್ನು ಚರ್ಚಿಸಲಾಗುತ್ತಿರುವುದರಿಂದ ಪ್ರಶ್ನೋತ್ತರ ಅವಧಿಯಲ್ಲಿ ಭಾಗವಹಿಸುವಂತೆ ಪ್ರತಿಪಕ್ಷ ಸದಸ್ಯರಿಗೆ ಮನವಿ ಮಾಡಿದರು. ಆದರೂ ಕಾಂಗ್ರೆಸ್, ಡಿಎಂಕೆ ಮತ್ತು ಎಡ ಪಕ್ಷಗಳು ಘೋಷಣೆ ಕೂಗುವುದನ್ನು ಮುಂದುವರೆಸಿದ್ದರಿಂದ ಸ್ಪೀಕರ್ ಓಂ ಬಿರ್ಲಾ ಅವರು ಸುಮಾರು ಕಲಾಪವನ್ನು ಸಂಜೆ 6 ಗಂಟೆಗೆ ಮುಂದೂಡಿದರು.
ಸಂಜೆ 6 ಗಂಟೆಗೆ ಕಲಾಪ ಮತ್ತೆ ಆರಂಭವಾದಾಗಲೂ ಪ್ರತಿಪಕ್ಷಗಳು ಪ್ರತಿಭಟನೆ ಮುಂದುವರೆಸಿದ್ದರಿಂದ ಸ್ಪೀಕರ್ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದ್ದಾರೆ.