ನವದೆಹಲಿ: ಮುಂದಿನ ವಾರ ಬಿಜೆಪಿ ಸೇರುವ ಮೂಲಕ ರಾಜಕೀಯ ರಂಗ ಪ್ರವೇಶಿಸುತ್ತಿರುವ ಮೆಟ್ರೋ ಮ್ಯಾನ್ ಖ್ಯಾತಿಯ ತಂತ್ರಜ್ಞ ಇ.ಶ್ರೀಧರನ್ ಅವರು, ಏಪ್ರಿಲ್-ಮೇ ನಲ್ಲಿ ನಡೆಯುವ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಮುಖ್ಯಮಂತ್ರಿಯಾಗಲು ಸಿದ್ಧ ಎಂದು ಶುಕ್ರವಾರ ಹೇಳಿದ್ದಾರೆ.
ಇಂದು ಫೋನ್ ಮೂಲಕ ಪಿಟಿಐ ಜತೆ ಮಾತನಾಡಿದ ಶ್ರೀಧರನ್ ಅವರು, ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಹಾಯ ಮಾಡುವುದು ನನ್ನ ಮುಖ್ಯ ಉದ್ದೇಶವಾಗಿದೆ ಮತ್ತು ಮುಖ್ಯಮಂತ್ರಿಯಾಗಲು ತಾವು ಸಿದ್ಧ ಎಂದು ಹೇಳಿದ್ದಾರೆ.
ರಾಜ್ಯಪಾಲರ ಹುದ್ದೆ ವಹಿಸಿಕೊಳ್ಳುವ ಬಗ್ಗೆ ಆಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ 88 ವರ್ಷದ ಶ್ರೀಧರನ್ ಅವರು, ಇದು ಕೇವಲ "ಸಾಂವಿಧಾನಿಕ ಸ್ಥಾನ ಅಷ್ಟೆ. ಅದಕ್ಕೆ ಯಾವುದೇ ಅಧಿಕಾರವಿಲ್ಲ" ಮತ್ತು ರಾಜ್ಯಪಾಲರಾದರೆ ರಾಜ್ಯಕ್ಕೆ ಯಾವುದೇ ಕೊಡುಗೆ ನೀಡಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
"ಕೇರಳದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನನ್ನ ಮುಖ್ಯ ಉದ್ದೇಶ. ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ನಾವು ಗಮನಹರಿಸಲು ಬಯಸುವ ಮೂರರಿಂದ ನಾಲ್ಕು ಪ್ರಮುಖ ಕ್ಷೇತ್ರಗಳಿವೆ. ಒಂದು ಮೂಲಸೌಕರ್ಯ ಅಭಿವೃದ್ಧಿ, ಕೈಗಾರಿಕೆ ಬೆಳವಣಿಗೆಗೆ ಆದ್ಯತೆ ನೀಡಲಾಗುವುದು. ಮೂಲಸೌಕರ್ಯವನ್ನು ದೊಡ್ಡ ರೀತಿಯಲ್ಲಿ ಅಭಿವೃದ್ಧಿಪಡಿಸುವುದು ಮತ್ತು ರಾಜ್ಯವನ್ನು ಸಾಲದಿಂದ ಹೊರಗೆ ತರುವುದು ನಮ್ಮ ಗುರಿಯಾಗಿದೆ ಎಂದರು.