ಕೊಚ್ಚಿ: ಭಾನುವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಮೂಲಕ ಅಭಿನಂದನೆಗೊಳಗಾದ ಕುಮಾರಕಂ ನ ಮಂಚಡಿಕಾರಿ ಮೂಲದ ರಾಜಪ್ಪನ್ ಅವರಿಗೆ ಉದ್ಯಮಿ ಬಾಬಿ ಚೆಮ್ಮನ್ನೂರ್ ಮೋಟಾರು ದೋಣಿ ನೀಡುವುದಾಗಿ ಘೋಶಿಸಿದ್ದಾರೆ. ಬಾಬಿ ಚೆಮ್ಮನ್ನೂರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಈ ಘೋಷಣೆ ಮಾಡಿದ್ದಾರೆ. ಜನ್ಮತ ಪೋಲಿಯೊ ಪೀಡಿತರಾಗಿ ವೆಂಬನಾಡ್ ಸರೋವರ ಮತ್ತು ಹತ್ತಿರದ ಸರೋವರಗಳಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ರಾಜಪ್ಪನ್ ತನ್ನ ಜೀವನ ಸಾಗಿಸುತ್ತಿದ್ದು ಅವರ ಕರ್ತವ್ಯ ನಿಷ್ಠೆ ಮನ್ ಕಿ ಬಾತ್ ಮೂಲಕ ಹೊರ ಜಗತ್ತಿನ ಗಮನಕ್ಕೆ ಬರುವಂತಾಯಿತು.
ಮನ್ ಕಿ ಬಾತ್ ನಲ್ಲಿ ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಮಾತನಾಡಿದ ಮೋದಿ ಸ್ವತಃ ದೋಣಿ ಹೊಂದಿಲ್ಲದ ರಾಜಪ್ಪನ್ ಅವರನ್ನು ಪ್ರಸ್ತಾಪಿಸಿದ್ದರು. ಮನೆಯಲ್ಲಿ ಟಿವಿ ಇಲ್ಲದ ಕಾರಣ ರಾಜಪ್ಪನ್ ಅವರಿಗೆ ಪ್ರಧಾನಿಯ ಪ್ರಶಂಸಾ ಮಾತುಗಳ ಬಗ್ಗೆ ತಿಳಿದಿರಲಿಲ್ಲ. ನೆರೆಮನೆಯ ಸ್ನೇಹಿತ ರಾಜಪ್ಪನ್‍ಗೆ ಮಾಹಿತಿ ನೀಡಿದ್ದರು. ರಾಜಪ್ಪನ್ ಅವರು ಪ್ರಧಾನಿಯನ್ನು ಖುದ್ದಾಗಿ ಭೇಟಿ ಮಾಡಲು ಬಯಸಿರುವುದಾಗಿ ತಿಳಿದುಬಂದಿದೆ.
ರಾಜಪ್ಪನ್ ಈಗ ಸ್ಥಳೀಯರೊಬ್ಬರ ದೋಣಿಯಲ್ಲಿ ಕಸವನ್ನು ಸಂಗ್ರಹಿಸುವ ಕಾಯಕ ನಿರ್ವಹಿಸುತ್ತಿದ್ದಾರೆ. ರಾಜಪ್ಪನ್ ಬಾಲಕನಾಗಿದ್ದಾಗಲೇ ತಮ್ಮ ಹೆತ್ತವರನ್ನು ಕಳಕೊಂಡು ನಿರ್ಗತಿಕರಾಗಿದ್ದರು. ಪ್ರಾಥಮಿಕ ಶಿಕ್ಷಣವನ್ನು ಪೂರೈಸಲಾಗದ ರಾಜಪ್ಪನ್, ಪರಿಸರ ಸಂರಕ್ಷಣೆಯ ಪ್ರಜ್ಞೆಯಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದು ಅದರಿಂದ ಬರುವ ಅಲ್ಪ ಆದಾಯದಲ್ಲಿ ತೃಪ್ತಿಹೊಂದಿದ್ದರು.
ಪ್ರತಿನಿತ್ಯ ಬೆಳಿಗ್ಗೆ ದೋಣಿಯಲ್ಲಿ ಪ್ಲಾಸ್ಟಿಕ್ ಸಂಗ್ರಹಿಸಲು ತೆರಳುವ ರಾಜಪ್ಪನ್ ಆಗಾಗ್ಗೆ ದೋಣಿಯಲ್ಲೇ ವಿಶ್ರಮಿಸುವುದೂ ಇದೆ. ರಾಜಪ್ಪನ್ ಕಳೆದ 15 ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಿದ್ದಾರೆ.