ಕಾಸರಗೋಡು: ಕೇರಳದ ಮೊತ್ತಮೊದಲ ಇಕ್ಕೋ ಸೆನ್ಸಿಟಿವ್ ಆಸ್ಟ್ರೋ ಟೂರಿಸಂ ಕೇಂದ್ರ ಕಾಞಂಗಾಡಿನ ಮಾವುಂಗಾಲಿನಲ್ಲಿ ತಲೆಯೆತ್ತಲಿದ್ದು, ಯೋಜನೆಯ ಶಿಲಾನ್ಯಾಸ ಸಮಾರಂಭ ಫೆಬ್ರವರಿ 7ರಂದು ಸಂಜೆ 4.30ಕ್ಕೆ ನಡೆಯುವುದು. ರಾಜ್ಯ ಕಂದಾಯ ಖಾತೆ ಸಚಿವ ಇ.ಚಂದ್ರಶೇಖರನ್ ಶಿಲಾನ್ಯಾಸ ನಡೆಸುವರು.
ಪ್ರಕೃತಿ ಸೌಂದರ್ಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಯೋಜನೆ ಮುಂದುವರಿಯಲಿದೆ. ಕೇಂದ್ರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಮೂಲಸೌಕರ್ಯ ಒದಗಿಸುವುದರ ಜತೆಗೆ ಸಂಗೀತ ಕಾರಂಜಿ, ಬೇಕಲಕೋಟೆ, ತೈಕಡಪ್ಪುರ ಹಿನ್ನೀರು ಹಾಗೂ ವಿಶಾಲ ಅರಬೀಸಮುದ್ರದ ಸುಂದರ ದೃಶ್ಯಗಳನ್ನು ಗುಡ್ಡದ ಮೇಲಿಂದ ವೀಕ್ಷಿಸಲು ಅನುಕೂಲವಾಗುವ ರೀತಿಯಲ್ಲಿ ಬೈನಾಕ್ಯುಲರ್, ಆಕಾಶವೀಕ್ಷಣೆಗೆ ಟೆಲಿಸ್ಕೋಪ್ ವ್ಯವಸ್ಥೆ ಏರ್ಪಡಿಸಲಾಗುವುದು. ಆಸನ, ಸೆಲ್ಫಿ ಪಾಯಿಂಟ್, ಲಘುಉಪಾಹಾರ ಕೇಂದ್ರ, ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಯಿರಲಿದೆ.
ಆಸ್ಟ್ರೋ ಟೂರಿಸಂ ಕೇಂದ್ರ ಕಾಸರಗೋಡು ನಗರದಿಂದ 31ಕಿ.ಮೀ ಹಾಗೂ ಕಾಞಂಗಾಡಿನಿಂದ ಐದು ಕಿ.ಮೀ ದೂರದಲ್ಲಿದ್ದು, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶೀಘ್ರ ತಲುಪಬಹುದಾಗಿದೆ. ಕಣ್ಣೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ 92ಕಿ.ಮೀ ದೂರದಲ್ಲಿದೆ.