ಪಟ್ನಾ: ಪಕ್ಕದಲ್ಲಿ ಆಗತಾನೇ ಹುಟ್ಟಿದ ಮಗು. ಆದರೆ, ಮನದಲ್ಲಿ ಪರೀಕ್ಷೆ ಬರೆಯುವ ಹಂಬಲ. ಅಂತೂ ಓದಿನ ಹಂಬಲವೇ ಮೇಲುಗೈ ಸಾಧಿಸಿತು. ಬಿಹಾರದ ಕುಸುಮ್ ಕುಮಾರಿ ಎಂಬ ಮಹಿಳೆ ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ಪರೀಕ್ಷೆ ಬರೆಯುವ ಮೂಲಕ ಮಾದರಿಯಾಗಿದ್ದಾರೆ.
ಬಿಹಾರದ ಸರಣ್ ಜಿಲ್ಲೆಯ ಲೋಕಮಾನ್ಯ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಸುಮ್ ಮಂಗಳವಾರ ನಡೆಯಲಿದ್ದ ಭೂಗೋಳದ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ಆದರೆ, ಸೋಮವಾರ ಮಧ್ಯರಾತ್ರಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಪತಿ ಮಲ್ಲಿಕ್ ರೈ ತಕ್ಷಣವೇ ಕುಸುಮ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಮಂಗಳವಾರ ಮುಂಜಾನೆ ಕುಸುಮ್ ಹೆಣ್ಣುಮಗುವಿಗೆ ಜನ್ಮನೀಡಿದರು.
ಹೆರಿಗೆಯಾದ ಕೆಲವು ಗಂಟೆಗಳ ಬಳಿಕ ಕುಸುಮ್ ತಾನು ಭೂಗೋಳದ ಪರೀಕ್ಷೆಗೆ ಹಾಜರಾಗಬೇಕೆಂಬ ಹಂಬಲ ವ್ಯಕ್ತಪಡಿಸಿದರು.ಪರೀಕ್ಷೆ ಬರೆಯಲು ಅವರು ಅಲ್ಲಿನ ಗಾಂಧಿ ಪ್ರೌಢಶಾಲೆಗೆ ಹೋಗಬೇಕಿತ್ತು. ಈ ಬಗ್ಗೆ ವೈದ್ಯರ ಗಮನಕ್ಕೆ ತರಲಾಯಿತು. ಕುಸುಮ್ ಅವರ ಓದಿನ ಹಂಬಲ ಮತ್ತು ದೃಢಮನಸ್ಸನ್ನು ಶ್ಲಾಘಿಸಿದ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ, ತಾಯಿ-ಮಗುವಿನ ಆರೋಗ್ಯ ಪರಿಶೀಲಿಸಿ ಆಸ್ಪತ್ರೆಯಿಂದ ಡಿಸ್‌ಚಾರ್ಚ್ ಮಾಡಿದರು.
'ಪರೀಕ್ಷಾ ಕೇಂದ್ರಕ್ಕೆ ನಾವೂ ಕುಸುಮ್ ಜೊತೆಗೆ ತೆರಳಿದ್ದೆವು. ಆಕೆ ಪರೀಕ್ಷೆ ಬರೆದು ಬರುವವರೆಗೆ ಹಸುಗೂಸನ್ನು ಜೋಪಾನವಾಗಿ ನೋಡಿಕೊಂಡೆವು' ಎಂದು ಕುಸುಮ್ ಪತಿ ಮಲ್ಲಿಕ್ ರೈ ತಿಳಿಸಿದ್ದಾರೆ.
'ಮದುವೆಯಾದಾಗ ಕುಸುಮ್ ಇನ್ನೂ ಇಂಟರ್‌ಮೀಡಿಯಟ್ ಓದುತ್ತಿದ್ದಳು. ಮದುವೆಯ ನಂತರವೂ ಆಕೆ ತನ್ನ ಶಿಕ್ಷಣವನ್ನು ಮುಂದುವರಿಸಲು ನಿರ್ಧರಿಸಿದಳು. ಕುಸುಮ್‌ನಂಥ ಹುಡುಗಿಯರು ಬಿಹಾರದ ಗ್ರಾಮೀಣ ಭಾಗದ ಜನರಿಗೆ ಸ್ಫೂರ್ತಿ' ಎಂದೂ ಮಲ್ಲಿಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.