ಅಹಮದಾಬಾದ್: ಅನ್ಯ ಧರ್ಮದ ಯುವಕನನ್ನು ವಿವಾಹವಾಗುತ್ತಿರುವ ಯುವತಿಗೆ, ಮದುವೆ ನೋಂದಣಿ ಮಾಡಿಸುವುದಕ್ಕಾಗಿ ಜುನಾಗಡದಿಂದ ಅಹಮದಾಬಾದ್‌ಗೆ ತೆರಳಲು ಪೊಲೀಸರು ರಕ್ಷಣೆ ನೀಡಬೇಕು ಎಂದು ಗುಜರಾತ್ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ವಿಡಿಯೊ ಕಾನ್ಫರೆನ್ಸ್ ಮೂಲಕ ಮಂಗಳವಾರ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೋನಿಯಾ ಗೋಕಣಿ ಮತ್ತು ಸಂಗೀತಾ ಕೆ. ವಿಶೇನ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಯುವತಿ, ಮುಸ್ಲಿಂ ಯುವಕನನ್ನು ಮದುವೆಯಾಗುವ ತನ್ನ ನಿರ್ಧಾರ ತಿಳಿಸಿದಾಗ, ಆಕೆಯ ಪೋಷಕರು ವಿರೋಧ ವ್ಯಕ್ತಪಡಿಸಿದರು. ಈ ಕಾರಣದಿಂದಾಗಿ ಯುವಕ ನ್ಯಾಯಾಲಯಕ್ಕೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ವಿಶೇಷ ವಿವಾಹ ಕಾಯ್ದೆ ಅಡಿ ಫೆ.9 ರಂದು ರಿಜಿಸ್ಟರ್ ವಿವಾಹವಾಗುವಂತೆ ನಿರ್ದೇಶನ ನೀಡಿತು. ಮದುವೆ ನೋಂದಣಿ ಮಾಡಿಸಲು ಜುನಾಗಡದಿಂದ ಅಹಮದಾಬಾದ್‌ವರೆಗೆ ಆ ಯುವತಿಯನ್ನು ಮಹಿಳಾ ಪೋಲೀಸ್ ಸಿಬ್ಬಂದಿ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಯ ರಕ್ಷಣೆಯಲ್ಲಿ ಪೊಲೀಸ್ ವಾಹನದಲ್ಲಿ ಕಳುಹಿಸಿಕೊಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿತು.
ನ್ಯಾಯಾಲಯ ಈ ಪ್ರಕರಣದ ವಿಚಾರಣೆಯನ್ನು ಫೆ.12ಕ್ಕೆ ಮುಂದೂಡಿದೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ.