ಮಡಿಕೇರಿ: ಕೋವಿಡ್ ಸುರಕ್ಷತೆಯ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಪ್ರವೇಶ ಪಡೆಯಲು ಕೆಲವೊಂದು ರಾಜ್ಯಗಳಿಂದ ನೆಗೆಟಿವ್ ವರದಿಯನ್ನು ಕಡ್ಡಾಯ ಮಾಡಲಾಗಿದೆ. ಕೇರಳದಲ್ಲಿ ಕರೊನಾ ವೈರಸ್ ಪ್ರಕರಣ ಹೆಚ್ಚುತ್ತಿರುವ ಕಾರಣದಿಂದ ಇಲ್ಲಿಂದ ಬರುವವರು ಈ ಸರ್ಟಿಫಿಕೇಟ್ ತರಲೇಬೇಕಿದೆ. ಇದೇ ಈಗ ಮದುವೆಯೊಂದಕ್ಕೆ ಭಾರಿ ಅಡ್ಡಿಯಾಗಿದ್ದು ಮದುಮಕ್ಕಳು ಸೇರಿದಂತೆ ಕುಟುಂಬಸ್ಥರು ಹೈರಾಣಾಗಿ ಹೋಗಿದ್ದಾರೆ.
ವಿಷಯ ಏನೆಂದರೆ................ ಮಡಿಕೇರಿಯ ಕಡಗದಾಳು ಗ್ರಾಮದ ರೋಹಿಣಿ ಅವರ ಮದುವೆ ಕಾಸರಗೋಡು ಜಿಲ್ಲೆ ಮುಳಿಯಾರ್‌ನ ಪ್ರಮೋದ್ ನಾಯರ್ ಅವರ ಜತೆ ಫಿಕ್ಸ್ ಆಗಿದೆ. ಮಡಿಕೇರಿಯಲ್ಲಿ ಇದೇ 1ರಂದು ಮದುವೆ ನಿಗದಿಯಾಗಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಮಾಡಲಾಗಿದೆ. ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ ಮದುವೆ ನಡೆಯಬೇಕಿದೆ.
ಆದರೆ ಕರೊನಾ ನೆಗೆಟಿವ್ ವರದಿ ಕಡ್ಡಾಯ ಮಾಡಿರುವುದು ಎರಡೂ ಕುಟುಂಬಸ್ಥರನ್ನು ಆತಂಕಕ್ಕೆ ಈಡು ಮಾಡಿದೆಯಂತೆ.ಸುರಕ್ಷತೆಯ ದೃಷ್ಟಿಯಿಂದ ಈ ರೀತಿ ಮಾಡಿರುವುದು ಸರಿಯಾಗಿಯೇ ಇದೆ. ಆದರೆ ಏಕಾಏಕಿ ಪ್ರವೇಶ ನಿಷೇಧಿಸಿರುವ ಕಾರಣ, ಕೋವಿಡ್ ನೆಗೆಟಿವ್ ವರದಿ ತರುವುದು ಕಷ್ಟವಾಗಿದೆ ಎನ್ನುತ್ತಾರೆ ರೋಹಿಣಿ ಪಾಲಕರು.
ಕೇರಳದಿಂದ ಕೊಡಗಿಗೆ ಬರುವವರು 72 ಗಂಟೆಯೊಳಗೆ ಪಡೆದ ಕರೊನಾ ನೆಗೆಟಿವ್ ವರದಿಯನ್ನು ತರಲೇಬೇಕಿದೆ. ಹೀಗೆ ಮಾಡಿರುವುದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ. ಅಷ್ಟೇ ಅಲ್ಲದೇ ನಮಗೆ ಟೆಸ್ಟ್ ಮಾಡಿಸಿಕೊಳ್ಳಲೂ ಅಡ್ಡಿ ಇಲ್ಲ ಒಪ್ಪಿಗೆ ಇದೆ. ಆದರೆ ನಮಗೆ ದೊಡ್ಡ ಸಮಸ್ಯೆ ಶುರುವಾಗಿದೆ ಎನ್ನುತ್ತಾರೆ ಆಶಾ ಅವರ ತಾಯಿ ರೋಹಿಣಿ.
ಇವರಿಗೆ ಅಡ್ಡಿ ಬಂದಿರುವುದು ಏನೆಂದರೆ, ಶನಿವಾರ, ಭಾನುವಾರ ರಜೆ ಇದೆ. ಜಿಲ್ಲಾಡಳಿತ ನೆಗೆಟಿವ್ ರಿಪೋರ್ಟ್ ಕೊಡಲು ವಿಳಂಬ ಆಗಲಿದೆ. ಹೀಗಾಗಿ ಸೋಮವಾರ ಬೆಳಗ್ಗೆ 10.45ಕ್ಕೆ ವಿವಾಹ ಮುಹೂರ್ತ ಇದ್ದು, ಅದು ಮುಹೂರ್ತದಲ್ಲಿಯೇ ನಡೆಯುತ್ತದೆಯೋ ಇಲ್ಲವೋ ಅನ್ನೋ ಆತಂಕ ಎದುರಾಗಿದೆ.
ಒಂದು ವೇಳೆ ರಿಪೋರ್ಟ್ ಬೇಕೇ ಬೇಕು ಎಂದಾದರೆ ಖಾಸಗಿ ಲ್ಯಾಬ್‌ನಲ್ಲಿ ಟೆಸ್ಟ್ ಮಾಡಿಸಬೇಕು. ಹೀಗೆ ಮಾಡಿಸಿದರೆ ಒಬ್ಬರಿಗೆ ಏನಿಲ್ಲವೆಂದರೂ ಎರಡು- ಎರಡೂವರೆ ಸಾವಿರ ಕೊಡಬೇಕಾದ ಸ್ಥಿತಿ ಇದೆ. ಮದುವೆಗೆ ಕನಿಷ್ಠ 10-15 ಮಂದಿ ಬರುತ್ತಾರೆ. ಎಲ್ಲರಿಗೂ ಖಾಸಗಿ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಿದರೆ 25-30 ಸಾವಿರ ಖರ್ಚು ಮಾಡಬೇಕು. ಇದು ಯಾವ ನ್ಯಾಯ ಎಂದು ಪ್ರಶ್ನಿಸುತ್ತಿದ್ದಾರೆ. ಕೂಲಿ ಮಾಡಿ ಮಗಳ ಮದುವೆ ಮಾಡುತ್ತಿರುವ ನಮ್ಮಂಥವರ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಿ ಮದುವೆ ಸುಸೂತ್ರವಾಗಿ ನೆರವೇರಿಸಲು ಅವರು ಮನವಿ ಮಾಡುತ್ತಿದ್ದಾರೆ.