ಅಬು ದಾಭಿ: ಮಂಗಳ ಗ್ರಹದಲ್ಲಿ ಜೀವಿಗಳ ಅಸ್ತಿತ್ವ ಇತ್ತಾ ಎಂಬ ಮಾನವರ ಅನ್ವೇಷಣೆಗೆ ಈಗ ಮತ್ತಷ್ಟು ಇಂಬು ಸಿಕ್ಕಿದೆ. ಅರಬ್ ಸಂಯುಕ್ತ ಸಂಸ್ಥಾನ (ಯುಎಇ) ಇತ್ತೀಚೆಗೆ ಹಾರಿಬಿಟ್ಟಿರುವ 'ಹೋಪ್ ಪ್ರೋಬ್' ಅಧ್ಯಯನ ಸಾಟಲೈಟ್ ಇದೀಗ ಮಂಗಳ ಗ್ರಹದ ತನ್ನ ಮೊದಲ ಚಿತ್ರಣವನ್ನು ಜಗತ್ತಿಗೆ ಶೇರ್ ಮಾಡಿದೆ.
ಎಮಿರಾತಿ ಇಂಜಿನಿಯರ್ಗಳು ನಿರ್ಮಿಸಿರುವ 'ಅಮಲ್' ಅಥವಾ 'ಹೋಪ್' ಪ್ರೋಬ್ಅನ್ನು 2020ರ ಜುಲೈ 20 ರಂದು ಜಪಾನಿನ ತಾನೆಗಶಿಮದಿಂದ ಲಾಂಚ್ ಮಾಡಲಾಗಿತ್ತು. ಮಂಗಳ ಗ್ರಹದ ಆರ್ಬಿಟ್ಅನ್ನು ಫೆಬ್ರವರಿ 9 ರಂದು ಇದು ಯಶಸ್ವಿಯಾಗಿ ಪ್ರವೇಶಿಸಿತ್ತು. ಇಂದು(ಫೆಬ್ರವರಿ 14) ಈ ಹೋಪ್ ಪ್ರೋಬ್ನ ಮೊದಲ ಚಿತ್ರವನ್ನು, ಯುಎಇ ಸೇನಾ ಪಡೆಗಳ ಡೆಪ್ಯುಟಿ ಸುಪ್ರೀಂ ಕಮಾಂಡರ್ ಆಗಿರುವ ಅಬು ದಾಭಿ ರಾಜಕುಮಾರ ಶೇಖ್ ಮೊದಮದ್ ಬಿನ್ ಜಯೆದ್ ಅಲ್ ನಹ್ಯನ್ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
ಫೆಬ್ರವರಿ 10 ರಂದು ತೆಗೆಯಲಾಗಿರುವ ಈ ಚಿತ್ರದಲ್ಲಿ ಸೂರ್ಯನ ಬೆಳಕು ಮಂಗಳ ಗ್ರಹದ ಮೇಲೆ ಆಗಷ್ಟೇ ಬೀಳುತ್ತಿರುವುದನ್ನು ಕಾಣಬಹುದು. ಗ್ರಹದ ಉತ್ತರ ಧೃವವನ್ನೂ ಅಲ್ಲಿನ ಅತಿದೊಡ್ಡ ಅಗ್ನಿಪರ್ವತ ಎನ್ನಲಾದ ಒಲಂಪಸ್ ಮಾನ್ಸ್ ಅನ್ನೂ ಈ ಚಿತ್ರ ತೋರಿಸುತ್ತದೆ ಎನ್ನಲಾಗಿದೆ.
'ಹೋಪ್ ಪ್ರೋಬ್ನ ಮೊದಲ ಚಿತ್ರದ ಪ್ರಸಾರವು ನಮ್ಮ ಇತಿಹಾಸದಲ್ಲಿ ವಿಶೇಷ ಕ್ಷಣವಾಗಿದೆ. ಇದು ಬಾಹ್ಯಾಕಾಶದ ಪರಿಶೋಧನೆಯಲ್ಲಿ ತೊಡಗಿರುವ ಮುಂದುವರಿದ ರಾಷ್ಟ್ರಗಳ ಸಾಲನ್ನು ಯುಎಇ ಸೇರಿರುವುದರ ಸೂಚನೆ. ಈ ಮಿಷನ್ನಿಂದ ಮಂಗಳ ಗ್ರಹದ ಬಗ್ಗೆ ಹೊಸ ಆವಿಷ್ಕಾರಗಳು ನಡೆದು ಮಾನವ ಜನಾಂಗಕ್ಕೆ ಉಪಯೋಗವಾಗಲಿದೆ ಎಂದು ನಾವು ಆಶಿಸುತ್ತೇವೆ' ಎಂದು ಶೇಖ್ ಮೊಹಮದ್ ಟ್ವೀಟ್ ಮಾಡಿದ್ದಾರೆ.
ಒಂದು ದೊಡ್ಡ ಕಾರಿನ ಗಾತ್ರವಿರುವ ಈ ಹೋಪ್ ಪ್ರೋಬ್, ಮಂಗಳ ಗ್ರಹದ ಇಕ್ವೇಟಾರ್ ಅನ್ನು ಸುತ್ತಲಿದ್ದು, ಪ್ರತಿ ಒಂಭತ್ತು ದಿನಗಳಿಗೊಮ್ಮೆ ಗ್ರಹದ ಪೂರ್ಣ ಚಿತ್ರಣವನ್ನು ಪಡೆಯಲಿದೆ. ಮೂರು ಅತ್ಯಾಧುನಿಕ ವೈಜ್ಞಾನಿಕ ಉಪಕರಣಗಳನ್ನು ಬಳಸಿ, ಗ್ರಹದ ವಾತಾವರಣದ ಬಗ್ಗೆ ಮಾಹಿತಿ ಸಂಗ್ರಹಿಸಲಿದೆ. ಒಂದು ಸಾವಿರ ಜಿಬಿಗೂ ಹೆಚ್ಚು ಡೇಟಾವನ್ನು ಸಂಗ್ರಹಿಸುವ ಯೋಜನೆ ಇದ್ದು, ಈ ಮಾಹಿತಿಯನ್ನು ಜಗತ್ತಿನ 200 ಶೈಕ್ಷಣಿಕ ಮತ್ತು ವೈಜ್ಞಾನಿಕ ಸಂಸ್ಥೆಗಳಿಗೆ ಉಚಿತವಾಗಿ ಶೇರ್ ಮಾಡಲಾಗುವುದು ಎನ್ನಲಾಗಿದೆ.