ನವದೆಹಲಿ: ಕಳೆದ ಜನವರಿ 26ರ ಗಣರಾಜ್ಯೋತ್ಸವ ದಿನ ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಕೆಂಪು ಕೋಟೆಯಲ್ಲಿ ಪ್ರತಿಭಟನೆ ಸಂದರ್ಭದಲ್ಲಿ ಖಡ್ಗವನ್ನು ಝಳಪಿಸುತ್ತಾ ಪ್ರತಿಭಟನಾ ನಿರತ ಗುಂಪನ್ನು ಪ್ರಚೋದಿಸಿದ್ದ 30 ವರ್ಷದ ಆರೋಪಿ ಮನಿಂದರ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಕಾರ್ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ಮನಿಂದರ್ ಸಿಂಗ್ ನನ್ನು ನಿನ್ನೆ ಸಾಯಂಕಾಲ 7.45ರ ಸುಮಾರಿಗೆ ವಾಹವ್ಯ ದೆಹಲಿಯ ಪಿತಂಪುರದ ಸಿ ಡಿ ಬ್ಲಾಕ್ ಬಸ್ ನಿಲ್ದಾಣದ ಬಳಿ ಪೊಲೀಸರು ಬಂಧಿಸಿದ್ದಾರೆ.
ಕಳೆದ ಗಣರಾಜ್ಯೋತ್ಸವ ದಿನ ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ದೆಹಲಿಯ ಕೆಂಪು ಕೋಟೆ ಬಳಿ ಮನಿಂದರ್ ಸಿಂಗ್ ತನ್ನ ಕೈಯಲ್ಲಿದ್ದ ಕತ್ತಿಗಳನ್ನು ಕುದುರೆ ಮೇಲೆ ಕುಳಿತು ಝಳಪಿಸುತ್ತಾ ಪ್ರತಿಭಟನಾ ನಿರತ ಗುಂಪನ್ನು ಮತ್ತಷ್ಟು ಉದ್ರೇಕಗೊಳಿಸುತ್ತಿದ್ದ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿತ್ತು. ನಂತರ ಹಿಂಸಾಚಾರ ತೀವ್ರವಾಗಿ ಅಪಾರ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿತ್ತು. ಪ್ರತಿಭಟನಾ ನಿರತರು ಹಲವು ಆಯುಧಗಳನ್ನು ತಂದಿದ್ದರು. ಐತಿಹಾಸಿಕ ಕೆಂಪು ಕೋಟೆಯನ್ನು ಸಾಕಷ್ಟು ಹಾನಿಮಾಡಿದ್ದರು ಎಂದು ದೆಹಲಿ ಪೊಲೀಸ್ ವಿಶೇಷ ಘಟಕದ ಉಪ ಆಯುಕ್ತ ಪ್ರಮೋದ್ ಸಿಂಗ್ ಕುಶ್ವ ತಿಳಿಸಿದ್ದಾರೆ.
ಮನಿಂದರ್ ಸಿಂಗ್ ತನ್ನ ನಿವಾಸವಿರುವ ಸ್ವರೂಪ ನಗರದ ಖಾಲಿ ಪ್ರದೇಶದಲ್ಲಿ ಕತ್ತಿ ತರಬೇತಿ ಶಾಲೆ ನಡೆಸುತ್ತಿದ್ದಾನೆ ಎಂಬ ಶಂಕೆಯಿದೆ. ಫೇಸ್ ಬುಕ್ ನಲ್ಲಿ ಹಲವು ಪ್ರಚೋದನಾಕಾರಿ ಪೋಸ್ಟ್ ಗಳನ್ನು ಹಾಕುತ್ತಿದ್ದ, ಸಿಂಘು ಗಡಿಭಾಗಕ್ಕೆ ಪದೇ ಪದೇ ಭೇಟಿ ನೀಡುತ್ತಾ ಅಲ್ಲಿ ರೈತ ಮುಖಂಡರು ಮಾಡುತ್ತಿದ್ದ ಭಾಷಣಗಳನ್ನು ಕೇಳಿ ಪ್ರೇರಣೆಗೊಂಡಿದ್ದ ಎಂದು ಪೊಲೀಸರು ಹೇಳುತ್ತಾರೆ.
ಮನಿಂದರ್ ಸಿಂಗ್ ಗಣರಾಜ್ಯೋತ್ಸವ ದಿನ ತೀವ್ರ ಹಿಂಸಾಚಾರಕ್ಕೆ 6 ಮಂದಿಗೆ ಪ್ರೇರಣೆ ನೀಡಿದ್ದ. ಎಲ್ಲಾ ಆರು ಮಂದಿ ಬೈಕ್ ನಲ್ಲಿ ಬಂದು ಟ್ರ್ಯಾಕ್ಟರ್ ರ್ಯಾಲಿಯಲ್ಲಿ ರೈತರ ಜೊತೆಗೂಡಿ ಸಿಂಘು ಗಡಿಯಿಂದ ಮುಕರ್ಬ ಚೌಕ್ ಕಡೆಗೆ ಬಂದಿದ್ದರು. ಟ್ರ್ಯಾಕ್ಟರ್ ರ್ಯಾಲಿ ಆರಂಭಿಸುವ ಮುನ್ನ ಮನಿಂದರ್ 4.3 ಅಡಿ ಉದ್ದದ ಖಾಂಡಸ್ ತಂದಿದ್ದರು.
ತಮ್ಮ ಯೋಜನೆಯ ಪ್ರಕಾರ, ಶಂಕಿತ ಮತ್ತು ಅವನ ಐದು ಸಹಚರರು ಮತ್ತು ಇತರ ಅಪರಿಚಿತ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಕೆಂಪು ಕೋಟೆಯನ್ನು ಪ್ರವೇಶಿಸಿ ಕತ್ತಿ ಝಳಪಿಸಿದರು. ಉದ್ರಿಕ್ತ ಗುಂಪು ಅಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಕೆಂಪು ಕೋಟೆಯ ಐತಿಹಾಸಿಕ ಸ್ಮಾರಕಕ್ಕೆ ಹಾನಿ ಉಂಟುಮಾಡಿತು.