ಕಾಸರಗೋಡು: ವಿಧಾನಸಭೆ ಚುನಾವಣೆಯ ಪೂರ್ವಭಾವಿಯಾಗಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರುಗಿತು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲೆಯ 524 ಪ್ರದೇಶಗಳಲ್ಲಿ 983 ಮತಗಟ್ಟೆಗಳನ್ನು ವಿಧಾನಸಭೆ ಚುನಾವಣೆ ಅಂಗವಾಗಿ ಸಜ್ಜುಗೊಳಿಸಲಾಗುವುದು. ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯನ್ನು ಕೋವಿಡ್ ಸಂಹಿತೆ ಪಾಲಿಸಿ ನಡೆಸುವಲ್ಲಿ ಸಹಕಾರ ನೀಡಿದ ರಾಜಕೀಯ ಪಕ್ಷಗಳನ್ನು ಅಭಿನಂದಿಸಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು. ವಿಧಾನಸಭೆ ಚುನಾವಣೆಯನ್ನೂ ಇದೇ ರೀತಿ ನಡೆಸಬೇಕಿದೆ ಎಂದವರು ನುಡಿದರು.
ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಕಾಸರಗೋಡು ಸರಕಾರಿ ಕಾಲೇಜು, ಪೆರಿಯ ಪಾಲಿಟೆಕ್ನಿಕ್, ನೆಹರೂ ಕಲಾ-ವಿಜ್ಞಾನ ಕಾಲೇಜು, ತ್ರಿಕರಿಪುರ ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ ಯಥಾಕ್ರಮವಾಗಿ ಮಂಜೇಶ್ವರ, ಕಾಸರಗೋಡು, ಉದುಮಾ, ಕಾಞಂಗಾಡ್, ತ್ರಿಕರಿಪುರ ವಿಧಾನಸಭೆ ಕ್ಷೇತ್ರಗಳ ವಿತರಣೆ-ಸ್ವೀಕಾರ ಕೇಂದ್ರಗಳು ಚಟುವಟಿಕೆ ನಡೆಸುವುವು. 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಕೋವಿಡ್ ಪಾಸಿಟಿವ್ ಆದವರಿಗೆ ಅಂಚೆ ಮತದಾನ ಸೌಲಭ್ಯ ವನ್ನು ರಾಜ್ಯ ಚುನಾವಣೆ ಆಯೋಗ ಪರಿಶೀಲಿಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಸೈಮನ್ ಫೆನಾರ್ಂಡಿಸ್, ಚುನಾವಣೆ ಸಹಾಯಕ ತಹಸೀಲ್ದಾರರಾದ ಜೆ.ಅನಿಲ್ ಕುಮಾರ್, ಬೀನಾ ಸಿ., ಪಿ.ಎನ್.ಕಣ್ಣನ್, ತಹಸೀಲ್ದಾರರಾದ ಎ.ವಿ.ರಾಜನ್, ಎನ್,ಮಣಿರಾಜ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಟಿ.ಕೆ.ರಾಜನ್, ವಿ.ರಾಜನ್, ಮ್ಯಾನುವೆಲ್ ಮೇಲತ್, ಕುಂಞಂಬು ನಂಬ್ಯಾರ್, ಕರಿವೆಳ್ಳೂರು ವಿಜಯನ್, ಮೂಸಾ ಬಿ.ಚೆರ್ಕಳ ಮೊದಲಾದವರು ಉಪಸ್ಥಿತರಿದ್ದರು.