ಬದಿಯಡ್ಕ: ಕೇರಳ ಅಯರ್ನ್ ಫ್ಯಾಬ್ರಿಕೇಶನ್ ಮತ್ತು ಇಂಜಿನಿಯರಿಂಗ್ ಯೂನಿಟ್ ಅಸೋಶಿಯೇಶನ್(ಕೆ.ಐ.ಎಫ್.ಇ.ಯು.ಎ) ಇದರ ನೇತೃತ್ವದಲ್ಲಿ ರಾಜ್ಯ ವ್ಯಾಪಕವಾಗಿ ಸ್ಥಳೀಯಾಡಳಿತ ಸಂಸ್ಥೆಗಳ ಮುಂಭಾಗದಲ್ಲಿ ಹಮ್ಮಿಕೊಂಡ ಧರಣಿ ಹೋರಾಟದ ಅಂಗವಾಗಿ ಕೆ.ಐ.ಎಫ್.ಇ.ಯು.ಎ ಬದಿಯಡ್ಕ ವಲಯ ಸಮಿತಿಯ ವತಿಯಿಂದ ಬದಿಯಡ್ಕ ಗ್ರಾಮ ಪಂಚಾಯತ್ ಕಚೇರಿ ಮುಂಭಾಗ ಧರಣಿ ಹೋರಾಟ ಮಂಗಳವಾರ ಪೂರ್ವಾಹ್ನ ನಡೆಯಿತು.
ಜಿಲ್ಲಾ ಸಮಿತಿ ಮಾಜಿ ಜೊತೆ ಕಾರ್ಯದರ್ಶಿ ಪಿ ವಿ ಶಿಜಿತ್ ಧರಣಿ ಹೋರಾಟವನ್ನು ಉದ್ಘಾಟಿಸಿದರು.ವಲಯಾಧ್ಯಕ್ಷ ರಾಮಕೃಷ್ಣ ರೈ ಸಭೆಯ ಅಧ್ಯಕ್ಷತೆವಹಿಸಿದ್ದರು.ಗಂಗಾಧರ ನಾಯಕ್ ಸ್ವಾಗತಿಸಿ, ರಾಮ.ಯಂ ವಂದಿಸಿದರು.ವಿಲ್ಫ್ರೆಡ್ ಡಿ ಸೋಜಾ,ಪ್ರಸಾದ್ ಬೋವಿಕಾನ, ಹಸ್ಸನ್ ನೆಲ್ಲಿಕಟ್ಟ, ನವೀನ್ ಕುಮಾರ್ ಮೊದಲಾದವರು ನೇತೃತ್ವವಹಿಸಿದ್ದರು.ಕಬ್ಬಿಣ ಉತ್ಪನ್ನಗಳ ಅನಿಯಮಿತ ಬೆಲೆ ಏರಿಕೆ ವಿರುದ್ಧ ಹಾಗೂ ಲೈಸನ್ಸ್ ರಹಿತ ಮೊಬೈಲ್ ವೆಲ್ಡಿಂಗ್ ವರ್ಕ್ ಗಳನ್ನು ಪ್ರತಿಭಟಿಸಿ,ಕಿರು ವೆಲ್ಡಿಂಗ್ ಉದ್ಯಮಗಳ ಸಂರಕ್ಷಣೆಗೆ ಒತ್ತಾಯಿಸಿ ಬದಿಯಡ್ಕ ಪಂಚಾಯತ್ ಅಧ್ಯಕ್ಷರಿಗೆ ಸಮಿತಿ ಪದಾಧಿಕಾರಿಗಳು ಮನವಿ ಸಲ್ಲಿಸಿದರು.