ಕಾಸರಗೋಡು: ಪೆರಿಯ ಅವಳಿ ಕೊಲೆ ಪ್ರಕರಣದ ಸಂಬಂಧ ಸಿಬಿಐ ತನಿಖಾ ತಂಡ ಶನಿವಾರ ಚಟ್ಟಂಚಾಲ್ ನ ಸಿಪಿಎಂ ಕಚೇರಿಗೆ ಭೇಟಿ ನೀಡಿತು. ಸಿಪಿಎಂ ಉದುಮ ಪ್ರಾದೇಶಿಕ ಸಮಿತಿ ಕಚೇರಿ ಕಾರ್ಯದರ್ಶಿಯಿಂದ ಹೇಳಿಕೆ ಸಂಗ್ರಹಿಸಿ ತಂಡ ಮರಳಿದೆ.
ತಪಾಸಣೆಗೆ ಸಿಬಿಐ ಡಿವೈಎಸ್ಪಿ ಅನಂತ ಕೃಷ್ಣನ್ ನೇತೃತ್ವ ವಹಿಸಿದ್ದರು. ಕೊಲೆ ನಡೆದ ಸ್ಥಳವನ್ನು ಸಿಬಿಐ ತಂಡ ಪರಿಶೀಲಿಸಿತ್ತು. ಕೊಲೆಯ ನಂತರ ಆರೋಪಿಗಳು ಧರಿಸಿದ್ದ ಬಟ್ಟೆಗಳನ್ನು ಸುಟ್ಟುಹಾಕಿದ ಪ್ರದೇಶವನ್ನೂ ಅವರು ಗುರುತಿಸಿದ್ದಾರೆ. ಅಪರಾಧ ಶಾಖೆ ಸಿದ್ಧಪಡಿಸಿದ ಚಾರ್ಜ್‍ಶೀಟ್ ಪ್ರಕಾರ, ಕೊಲೆಯ ಬಳಿಕ ಆರೋಪಿಗಳು ಸಿಪಿಎಂ ಪ್ರಾದೇಶಿಕ ಸಮಿತಿ ಕಚೇರಿಯಲ್ಲಿದ್ದರು. ಈ ಹಿನ್ನೆಲೆಯಲ್ಲಿ ಸಿಬಿಐ ಆಗಮಿಸಿ ಪರಿಶೀಲನೆ ನಡೆಸಿದೆ.
ಅಲ್ಲದೆ, ಕಾಞಂಗಾಡ್ ಬ್ಲಾಕ್ ಪಂಚಾಯತಿ ಅಧ್ಯಕ್ಷ ಮಣಿಕಂಠನ್ ಅವರ ಹೇಳಿಕೆಯನ್ನು ತೆಗೆದುಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಮಣಿಕಂಠನ್ 14 ನೇ ಆರೋಪಿಯಾಗಿದ್ದಾರೆ. ಕೊಲೆ ನಡೆದ ಸಂದರ್ಭ ಉದುಮ ಪ್ರಾದೇಶಿಕ ಕಾರ್ಯದರ್ಶಿಯಾಗಿ ಮಣಿಕಂಠನ್ ಕಾರ್ಯನಿರ್ವಹಿಸುತ್ತಿದ್ದರು.
ಯುವ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್ ಲಾಲ್ ಅವರನ್ನು 2019ರ ಫೆಬ್ರವರಿ 17 ರಂದು ಪೆರಿಯಾದಲ್ಲಿ ಕೊಲೆಗೈಯ್ಯಲಾಗಿತ್ತು. ಇಬ್ಬರನ್ನು ಎಚಿಲಾಡುಕ್ಕಂ ರಸ್ತೆ ಬಳಿ ಕಾರಲ್ಲಿ ಆಗಮಿಸಿದ ಗುಂಪು ತಡೆದು ಹಲ್ಲೆ ಮಾಡಿ ಕೊಚ್ಚಿಕೊಲೆಗೈಯ್ದಿತ್ತು. ಪ್ರಕರಣದಲ್ಲಿ 14 ಆರೋಪಿಗಳಿದ್ದರು.
ಸಾಜಿ ಸಿ ಜಾರ್ಜ್, ಸುರೇಶ್, ಅನಿಲ್ ಕುಮಾರ್, ಜಿಜಿನ್, ಶ್ರೀರಾಗ್, ಅಶ್ವಿನ್, ಸುಭಾಷ್, ಮುರಳಿ, ರಂಜಿತ್, ಪ್ರದೀಪನ್, ಮಣಿಕಂಠನ್, ಬಾಲಕೃಷ್ಣನ್ ಎನ್ ಮತ್ತು ಮಣಿಕಂಠನ್ ಬಿ. ಆ ಹದಿನಾಲ್ಕು ಮಂದಿ ಆರೋಪಿಗಳಾಗಿದ್ದಾರೆ. ತಲೆಗೆ ತೀವ್ರವಾದ ಗಾಯಗಳಾದ ಕೃಪೆಶ್ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮತ್ತು ಶರತ್ ಲಾಲ್ ಸ್ಥಳದಲ್ಲೇ ಮೃತಪಟ್ಟಿದ್ದರು.